SHARE

ಬೆಳಗಾವಿ: ಎರಡನೇ ಭಾರಿ ಪ್ರವಾಹ ಉಕವನ್ನು ಭಾದಿಸುತ್ತಿದೆ ಎಂದು ಜೆಡಿಎಸ್ ರಾಜ್ಯ ನಾಯಕ ಎನ್. ಎಚ್. ಕೋನರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಕೇಂದ್ರದ ಇಬ್ಬರು ಸಚಿವರು, ಕೇಂದ್ರದ ಎರಡು ಅಧ್ಯಯನ ತಂಡಗಳು ಜೊತೆಗೆ ಎರಡು ಬಾರಿ ಮುಖ್ಯಮಂತ್ರಿ ಬಿಎಸ್ವೈ ಬಂದು ಹೋಗಿದ್ದಾರೆ. ಆದರೆ ಪ್ರವಾಹ ಪರಿಹಾರ ಮಾತ್ರ ಶೂನ್ಯ ಎಂದು ಜರಿದರು.

ಟೆಂಪರರಿ ಶೆಡ್ ಜನರಿಗೆ ಮೊದಲು ಸರಕಾರ ಮಾಡಿಕೊಡಬೇಕಿತ್ತು. ಕೇಂದ್ರ ಸರಕಾರ ಸಂಪೂರ್ಣ ಮೂಕನಂತೆ ವರ್ತಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದರೂ ಪ್ರವಾಹ ಪರಿಹಾರದ ಬಗ್ಗೆ ಚಕಾರ ಎತ್ತಲಿಲ್ಲ. ಮಾಜಿ ಪ್ರಧಾನಿ ಎಚ್. ಡಿ. ದೇವೆಗೌಡ 5ಸಾವಿರ ಕೋಟಿ ಪ್ರಥಮ ಪರಿಹಾರ ಕೊಡಲು ಪ್ರಧಾನಿಗೆ ಪತ್ರ ಬರೆದರೂ ಸ್ಪಂದಿಸಿಲ್ಲ. ತಮ್ಮದೇ ಪಕ್ಷದ ಸಿಎಂ ಯಡಿಯೂರಪ್ಪ ಮನವಿಗೂ ಕೇಂದ್ರ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇರಳ ಸೇರಿ ಇತರ ರಾಜ್ಯಗಳಿಗೆ ಪರಿಹಾರ ಕೊಡುವ ಕೇಂದ್ರ ಸರಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ.
ಮಹಾದಾಯಿ ಚರ್ಚೆಗೆ ಬಿಎಸ್ ವೈ ಮಹಾರಾಷ್ಟ್ರಕ್ಕೆ ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಗೋವಾ- ಕರ್ನಾಟಕ ಮಾತುಕತೆ ಯಾಕೆ ಬೇಕು ಎಂದು ಸಚಿವ ಪ್ರಹ್ಲಾದ್ ಜೋಶಿಗೆ ಪ್ರಶ್ನಿಸಿದರು. ಟ್ರಿಬ್ಯೂನಲ್ ಆದೇಶಕ್ಕಿಂತ ಮುಂಚೆ ಮಾತುಕತೆ ಆಗುತ್ತದೆ ಎಂಬುವುದನ್ನು ಜೋಶಿ ಅರಿಯಬೇಕು ಎಂದರು.
ಉತ್ತರ ಕರ್ನಾಟಕಕ್ಕೆ ಆದ ಪ್ರವಾಹ ಸಂಕಷ್ಟ ಎದುರಿಸಲು ತಕ್ಷಣ ಬೆಳಗಾವಿಯಲ್ಲಿ ಅಧಿವೇಶನ ಕರೆಯಲು ಸರಕಾರಕ್ಕೆ ಒತ್ತಾಯಿಸಿದರು.

ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯಾಗಿ ಸುಮ್ಮನಾದರೆ ಹೇಗೆ? ಬೆಳಗಾವಿಯ ವ್ಯಕ್ತಿ ಉಪಮುಖ್ಯಮಂತ್ರಿ ಆಗಿ ಸಾಧನೆ ಏನು ಮಾಡಬೇಕೆಂದಿದ್ದೀರಿ ಎಂದು ಪ್ರಶ್ನಿಸಿದರು. 300ರಿಂದ 400 ಟಿಎಂಸಿ ನೀರು ವ್ಯರ್ಥ ಪೋಲಾಗಿದೆ. ಸೆ. 19ರಂದು ಬೆಂಗಳೂರಿನಲ್ಲಿ ಬೆಳಗಾವಿ- ಚಿಕ್ಕೋಡಿ ಮತಕ್ಷೇತ್ರದ ಜೆಡಿಎಸ್ ಸಭೆ ಕರೆಯಲಾಗಿದೆ. ಹೊಸ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಮಾಡಲು ಚರ್ಚೆ ನಡೆಯಲಿದೆ ಎಂದರು. ಶಂಕರ ಮಾಡಲಗಿ, ಫೈಜುಲ್ಲಾ ಮಾಡಿವಾಲೆ, ನಾಸೀರ್ ಬಾಗವಾನ ಇತರರು ಉಪಸ್ಥಿತರಿದ್ದರು.