SHARE

ವಿಶೇಷ ಸಂದರ್ಶನ
G. Purushotham
ಬೆಳಗಾವಿ: ಪ್ರಸ್ತುತ ಬಾಕಿ ರೈಲ್ವೇ ಯೋಜನೆಗಳನ್ನು 2020ರ ವೇಳೆಗೆ ಜಾರಿಗೊಳಿಸಿ, ಮುಂದಿನ ಹತ್ತು ವರ್ಷದಲ್ಲಿ ₹50ಲಕ್ಷ ಕೋಟಿಯ ರೈಲ್ವೇ ಯೋಜನೆಗಳನ್ನು ರೂಪಿಸಿ ಅಭಿವೃದ್ದಿಗೆ ಖರ್ಚು ಮಾಡಲಾಗುವುದು ಎಂದು ಕೇಂದ್ರ ರೈಲ್ವೇ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.

ಇಂದು thebelgaumnews.com ನೊಂದಿಗೆ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳದ ಹತ್ತು ಹಲವು ಯೋಜನೆ-ಯೋಚನೆಗಳನ್ನು ಹೊರಹಾಕಿದರು. ಯಾವುದೇ ಪಕ್ಷ ಹಾಕಿಕೊಂಡ ಇಲ್ಲಿತನಕದ ರೈಲ್ವೇ ಯೋಜನೆಗಳನ್ನು ತ್ವರಿತವಾಗಿ ಮುಗಿಸುವ ಆಸೆ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ನಮ್ಮ ಜವಾಬ್ದಾರಿ ಇಮ್ಮಡಿಗೊಳಿಸಿದ್ದಾರೆ, ಅವರ ಸಂಕಲ್ಪ ಈಡೇರಿಸಲು ಎಡೆಬಿಡದೇ ದೇಶವ್ಯಾಪಿ ಸಂಚರಿಸುತ್ತಿದ್ದೇನೆ ಎಂದರು. ನಮ್ಮದು ಇಟಲಿ ಸರಕಾರ ಅಲ್ಲ,’ಭಾರತ ಸರಕಾರ’, ಭಾರತ ಸರಕಾರದಲ್ಲಿ ಕನಸುಗಳನ್ನು ನನಸು ಮಾಡಿಕೊಳ್ಳಲು ಪ್ರಥಮಾದ್ಯತೆ ಇದೆ. ಅದಕ್ಕೆ ಎಡೆಬಿಡದ ಸಂಕಲ್ಪಯಾತ್ರೆ ನಡೆದಿದೆ ಎಂದು ಹಿಂದಿನ ಸರಕಾರಗಳ ನಡೆಯನ್ನು ಅವರು ಮೆತ್ತಗೆ ಮಾತಿನಲ್ಲೇ ದೂಷಿಸಿದರು.

ಲಕ್ಷಾಂತರ ಉದ್ಯೋಗ: ₹50ಲಕ್ಷ ಕೋಟಿ ರೈಲ್ವೇ ಯೋಜನೆಗಳನ್ನು ರೂಪಿಸಿ ಲಕ್ಷಾಂತರ ಯುವಕರಿಗೆ ಉದ್ಯೋಗ, ವಿಶ್ವದರ್ಜೆಯ ರೈಲ್ವೇ ಸೇವೆ ನೀಡಿ ನಮ್ಮ ದೇಶದ ಸಂಪರ್ಕ ಕ್ರಾಂತಿಯ ಗೌರವ ಜಾಗತಿಕವಾಗಿ ಹೆಚ್ಚಿಸಿಕೊಳ್ಳುತ್ತೇವೆ ಎಂದರು. ಪ್ರಧಾನಿ ನರೇಂದ್ರ ಮೋದಿ ರೈಲ್ವೇ ನಿಲ್ದಾಣದಲ್ಲಿ ಹಿಡಿದ ಕಸಬರಿಗೆ ಈಗ ಇಡೀ ದೇಶಾದ್ಯಂತ ಎಲ್ಲ ರೇಲ್ವೆ ನಿಲ್ದಾಣಗಳು ಪರಸ್ಪರ ಸ್ವಚ್ಛತೆಗೆ ಸ್ಪರ್ಧೆಗಿಳಿಯುವಂತೆ ಮಾಡಿದೆ.

36ನಗರಗಳಿಗೆ ವಿಮಾನ: ಈಗಾಗಲೇ ತೀವ್ರ ಪ್ರಯತ್ನಗಳ ನಂತರ ದೇಶದ 36 ಪ್ರದೇಶಗಳಿಗೆ ವಿಮಾನ ಸಂಪರ್ಕ ಕಲ್ಪಿಸಿದ ಅಪಾರ ಸಂತಸ ನನಗೆ ಉಂಟುಮಾಡಿದೆ. ರಸ್ತೆ ಸಾರಿಗೆ, ಜಲಸಾರಿಗೆ ಹಾಗೂ ವಾಯುಸಾರಿಗೆಗಿಂತ ರೈಲು ಸಾರಿಗೆ ಅಭಿವೃದ್ಧಿಪಡಿಸಲು ನಾನು ಕನಸು ಹೊಂದಿದ್ದು, ನನಸು ಮಾಡಿಕೊಳ್ಳುತ್ತೇವೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯ ಮುಕ್ತ: ರೈಲ್ವೆಯನ್ನು ಸಂಪೂರ್ಣ ರಾಜಕೀಯ ಮುಕ್ತ ಮಾಡಲಾಗಿದೆ. ಅನಾವಶ್ಯಕ ರಾಜಕೀಯ ಹಾಗೂ ಬಾಹ್ಯ ಒತ್ತಡಗಳಿಗೆ ರೈಲ್ವೇಯಲ್ಲಿ ಅವಕಾಶವಿಲ್ಲ.

ಮೂರು ರಾಜ್ಯಗಳಿಗೆ ವರದಾನ: ಡಬ್ಲಿಂಗ್ ಲೈನ್ ನಡೆದ ಕೆಲಸಗಳ ಮೂಲಕ ಮಹಾರಾಷ್ಟ್ರ- ಕರ್ನಾಟಕ- ಗೋವಾ ರಾಜ್ಯಗಳ ಮಧ್ಯೆ ಅಭಿವೃದ್ಧಿ ವೇಗ ಹೆಚ್ಚಲಿದೆ ಎಂದರು.

ಸರ್ವೇ ಎಂಬುವುದೇ ಕಾಲಹರಣ ಅಷ್ಟೇ: ರೈಲ್ವೇ ಮಾರ್ಗಗಳ ನಿರ್ಮಾಣಕ್ಕೆ’ಸರ್ವೇ’ ಎಂಬ ಪದವೇ ನಗೆಗೀಡು ಎಂದರು. ರೈಲ್ವೇ ಮಾರ್ಗ ಮಾಡುವುದೇ ನಮ್ಮ ಇಚ್ಛೆ ಆಗಿದ್ದರೆ ಸರ್ವೇ ಯಾಕೆ ಮಾಡುತ್ತ ಕೂಡಬೇಕ್ರಿ…ಎಂದು ಮರುಪ್ರಶ್ನಿಸಿದ ಸಚಿವ ಸುರೇಶ ಅಂಗಡಿ ಅವರು ಬೇಂಕೆಂದ ಅಗತ್ಯ ಮಾರ್ಗದಲ್ಲಿ ಸರ್ವೇ ನೆಪದ ಕಾಲವಿಳಂಬ ಮಾಡದೇ ಲೈನ್ ಹಾಕಬೇಕಾಗುತ್ತದೆ, ಅದನ್ನು ಮಾಡೋಣ ಎಂದು ವಿಶ್ವಾಸದ ನಗೆ ಬೀರಿದರು.

ಕುಂಬಾರರು ಏಳ್ಗೇ: ಪ್ಲಾಸ್ಟಿಕ್ ಅನ್ನು ದೇಶಾದ್ಯಂತ ಸಂಪೂರ್ಣ ನಿಷೇಧಿಸಲಾಗಿದ್ದು, ಕುಂಬಾರರು ಹಾಗೂ ಬಟ್ಟೆ ಉದ್ಯಮ ಹಾಗೂ ಬಟ್ಟೆ ಉದ್ಯೋಗಿಗಳಿಗೆ ಆದ್ಯತೆ ನೀಡಿ ಅವರ ಜೀವನ ಹಸನು ಮಾಡಲಾಗುವುದು. ಕುಂಬಾರಿಕೆ ಹಾಗೂ ಬಟ್ಟೆ ಬ್ಯಾಗಗಳ ಬಳಕೆ ರೈಲ್ವೇಯಲ್ಲಿ ನಡೆಯಲಿದೆ.
ಪ್ಲಾಸ್ಟಿಕ ಬಳಕೆ ನಿಷೇಧದ ಬಗ್ಗೆ ಆಯಾ ಸ್ಥಳೀಯ ಆಡಳಿತಗಳ ಮೂಲಕ ಶಾಲಾ ಕಾಲೇಜುಗಳಲ್ಲಿ ತಿಳಿವಳಿಕೆ ನೀಡಲಾಗುತ್ತಿದೆ ಎಂದರು.

ಉದ್ಯೋಗ ಸೃಷ್ಟಿ, ಕೈಗಾರಿಕೆ: ನಿರ್ಲಕ್ಷಿತ ಬೆಳಗಾವಿ ಈಗ ಮುನ್ನಲೆಗೆ ಬಂದು ಏನೆಲ್ಲ ಸೌಕರ್ಯ ಒದಗಿಸಲಾಗಿದೆ..! ಈಗ ನನ್ನ ಮುಂದಿರುವುದು ಬೆಳಗಾವಿಗರಿಗೆ ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕೆಗಳನ್ನು ತಂದು ಉತ್ತೇಜಿಸುವುದು ಎಂಬ ಮುಂದಿನ ಬೆಳಗಾವಿ ಬಗೆಗಿನ ತಮ್ಮ ಕನಸು ಬಿಚ್ಚಿಟ್ಟರು.

ಸ್ಪೆಷಲ್ ಗ್ಲಾಸ್ ಬೋಗಿ: ಪ್ರವಾಸಿ ಉತ್ತೇಜನಕ್ಕೆ ಎರಡು ಸಂಪೂರ್ಣ ಗ್ಲಾಸ್ ಹೊಂದಿದ ಬೋಗಿಗಳನ್ನು ತಯಾರಿಸಿ ಅಳವಡಿಸಲಾಗುತ್ತಿದೆ. ದೂಧಸಾಗರ ಸೇರಿ ಇತರ ಪ್ರವಾಸಿ ಸ್ಥಾನಗಳನ್ನು ಜನ ನೋಡಿ ಆನಂದಿಸಿ ರೈಲ್ವೇಯೊಂದಿಗೆ ಶಿಸ್ತು ಸಂಯಮದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಪ್ರವಾಸೋದ್ಯಮ ಬೆಳೆಸುವಲ್ಲಿ ಆಗದ ಯೋಜನೆ ಯೋಚನೆಗಳು ಟೂರಿಸಂ ಬಡವಾಗಲು ಕಾರಣ ಎಂದು ಅಸಮಧಾನ ವ್ಯಕ್ತಪಡಿಸಿದರು.

ಪರೀಕ್ಷೆ ಬರಿರೀ: ಕನ್ನಡಿಗರು- ಮರಾಠಿಗರು ಮತ್ತು ದಕ್ಷಿಣ ಭಾರತದ ಜನ ರೈಲ್ವೇ ಪರೀಕ್ಷೆ ಬರೀರೀ ಎಂದು ಅಂಗಡಿ ಮನವಿ ಮಾಡಿದರು. ಬರೀ ಬಿಹಾರ, ಉತ್ತರಪ್ರದೇಶ ಸೇರಿ ಆ ಕಡೆಯ ಉದ್ಯೋಗಿಗಳು ರೈಲ್ವೆಯಲ್ಲಿ ತುಂಬಿಕೊಂಡಿದ್ದಾರೆ. ನಮ್ಮ ಜನಾನೂ ರೈಲ್ವೇ ಪರೀಕ್ಷೆಗೆ ಅರ್ಜಿ ಹಾಕ್ರೀ ಎಂದು ಸುರೇಶ ಅಂಗಡಿ ಕರೆ ನೀಡಿದ್ದಾರೆ. Railway Recruitment Board ಪರೀಕ್ಷೆಗಳನ್ನು ನಡೆಸುತ್ತದೆ, ವಿಶಾಲ ಅಗಸಿಮನೆ( corridor) ರೈಲ್ವೇ ಆಗಿದ್ದು, ರೈಲ್ವೇ ಇಲಾಖೆಯ ಮಹತ್ವ ನಾನು ಮಂತ್ರಿ ಆದ ಮೆಲೇಯೇ ಹೆಚ್ಚು ತಿಳಿದುಕೊಂಡೆ ಎಂದರು. ಮಂತ್ರಿ ಆಗುವ ಮೊದಲು ರೈಲ್ವೇ ವಿರುದ್ದ ಆರೋಪ ಮಾಡುತ್ತಿದ್ದೇವು, ಆದರೆ ಅದರಷ್ಟು ಸೇವಾ ಇಲಾಖೆ ಮತ್ತೊಂದಿಲ್ಲ, ಅದರ ಸೇವೆ ಅಪೂರ್ವ ಎಂದು ಇಂಡಿಯನ್ ರೈಲ್ವೇ ಸಮರ್ಥಿಸಿಕೊಂಡರು. ಸ್ಕಿಲ್ ಎನ್ನುವುದು ಪ್ರತಿ ವ್ಯಕ್ತಿಯ ವೈಯಕ್ತಿಕ ಏಳ್ಗೆ, ಸಾಮೂಹಿಕ ಏಳ್ಗೆಗೆ ಸಹಕಾರಿ ಎಂದು ವ್ಯಾಖ್ಯಾನಿಸಿದರು. ಜಿಎಸ್ ಟಿ ಏಕರೂಪ ಆರ್ಥಿಕತೆ, ಏಕರೂಪ ನಾಗರಿಕತ್ವ, ಬಡವರು ಶ್ರೀಮಂತರ ನಡುವೆ ಕಂದಕ ಮುಚ್ಚುವ ಪ್ರಧಾನಿ ಮೋದಿ ಕೆಲಸ ದೇಶದ ಜನತೆಯ ಮನಸೆಳೆದಿದೆ ಎಂದರು.

ಸಶಕ್ತ, ಜನಪ್ರಿಯ ಮುಖ್ಯಮಂತ್ರಿ: ಬಿ. ಎಸ್. ಯಡಿಯೂರಪ್ಪ ಒಬ್ಬ ಸಶಕ್ತ ಮುಖ್ಯಮಂತ್ರಿ. ಪ್ರವಾಹ ಎದುರಿಸಲು ಅವರು ಘೋಷಿಸಿದ ಪರಿಹಾರ ಮೊತ್ತಗಳು ಅಪೂರ್ವವಾಗಿವೆ. ಪ್ರವಾಹ ಎದುರಿಸುವ ಜವಾಬ್ದಾರಿ ರಾಜ್ಯ ಸರಕಾರದ್ದಾದರೆ, ಅಗತ್ಯ ನೆರವು ನೀಡುವುದು ಕೇಂದ್ರದ ಕರ್ತವ್ಯ. ಕಾಯ್ದು ನೋಡಿ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂಪರ್ ಸಹಾಯ ಮಾಡುತ್ತಾರೆ. ಪ್ರಧಾನಿ ಅವರ ಕೆಲಸಗಳು ಯಾವಾಗಲೂ ಸಸ್ಪೆನ್ಸ್ ಮತ್ತು ಕರಾರುವಕ್ಕಾಗಿರುತ್ತವೆ. ಪೀಡಿತ 17ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಹೆಚ್ಚಿನ ನೆರವು ನೀಡೆ ನೀಡುತ್ತಾರೆ ನೋಡಿ ಎಂದರು. ಈಗಾಗಲೇ ಪರಿಹಾರಕ್ಕಾಗಿ ರಾಜ್ಯದ ಜನಪ್ರತಿನಿಧಿಗಳು ಅವರ ಗಮನ ಸೆಳೆದಿದ್ದೇವೆ ಎಂದರು. ರೈಲ್ವೇ ಯೋಜನೆಗಳ ಜೊತೆಗೆ ಬೆಳಗಾವಿಯಲ್ಲಿ ಉದ್ಯೋಗಗಳ ಸೃಷ್ಟಿ & ಅದಕ್ಕಾಗಿ ಭಾರಿ ಕಂಪನಿಗಳನ್ನು ಕರೆತಂದು ಕೈಗಾರಿಕಾ ಹಬ್ ಮಾಡುವುದು ನನ್ನ ಮುಂದಿನ ಕೆಲಸ, ಅದನ್ನು ಮಾಡುತ್ತೇನೆ. ಬೆಳಗಾವಿಗರು ಬೆನ್ನು ತಟ್ಟು ಹುರಿದುಂಬಿಸಿ ಎಂದರು.

ಬೆಂಗಳೂರಲ್ಲ, ಬೆಳಗಾವಿ ಹೆಡಕ್ವಾರ್ಟರ್: ರೈಲ್ವೇ ಸಚಿವರಿಗೆ ಬೆಂಗಳೂರಲ್ಲಿ ಕಚೇರಿ ಕೊಡಲಾಗುತ್ತದೆ. ಆದರೆ ನಾನು ಬೆಳಗಾವಿಯನ್ನು ಹೆಡ್ ಕ್ವಾರ್ಟರ್ ಮಾಡಿಕೊಂಡಿದ್ದೇನೆ. ಉಪರಾಜಧಾನಿ ಬೆಳಗಾವಿ ಈಗ ರೈಲ್ವೇ ಕಾರ್ಯಗಳಿಗೆ ನನ್ನ ಹೆಡಕ್ವಾರ್ಟರ್ ಎಂದರು..!