SHARE

ಬೆಳಗಾವಿ: ಕಟಬಾಕಿದಾರರಿಗೆ ಯಾವುದೆ ಕಾರಣಕ್ಕೂ ಸಾಲ ತುಂಬಲು ಒತ್ತಾಯ ಮಾಡಕೂಡದು ಎಂದು ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ ಜಿಲ್ಲೆಯ ಬ್ಯಾಂಕ್ ಮತ್ತು ಫೈನಾನ್ಸಗಳಿಗೆ ಕಟ್ಟಪ್ಪನೆ ಮಾಡಿದ್ದಾರೆ. ಇಂದು ನಡೆದ ಬ್ಯಾಂಕರ್ಸ್ ಮತ್ತು ರೈತರ ಸಭೆ ಉದ್ದೇಶಿಸಿ ಮಾತನಾಡಿದರು. ಶ್ರೀಮಂತ ಬಡವ ಎನ್ನದೇ ಎಲ್ಲರನ್ನೂ ಪ್ರವಾಹ ಬಾಧಿಸಿದೆ. ಎಲ್ಲರೂ ತಮ್ಮ ಉದ್ಯೋಗ-ಉದ್ಯಮ ಮನೆ-ಮಠ ಕಳೆದುಕೊಂಡು ಜೀವನ ಹದಗೆಟ್ಟು ಹೋಗಿದೆ. ಈ ಸಂದರ್ಭ ತೊಂದರೆ ಕೊಡದೇ ಮೈಕ್ರೋ ಫೈನಾನ್ಸಗಳು ಯಾವುದೇ ಕಾರಣಕ್ಕೂ ಕಿರುಕುಳ ಮಾಡದಂತೆ ಈ ಹಿಂದೆ ನಾನೇ ಆದೇಶ ಕೊಡಲಾಗಿಯೂ ಕೆಲ ಫೈನಾನ್ಸಗಳು ಗಂಜಿ ಕೇಂದ್ರಗಳಿಗೆ ತೆರಳಿ ಸಾಲ ವಸೂಲಾತಿಗೆ ಹೋಗಿ ಹೀನಕೃತ್ಯ ಮಾಡಿದ್ದಾರೆ ಎಂದು ಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು & ಮಾನವೀಯತೆ ಎರಡೂ ಇದ್ದಾಗ ವ್ಯವಸ್ಥೆ ಸುಧಾರಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಒತ್ತಾಯವಾಗಿ ಮಾನಸಿಕ ಇಲ್ಲವೇ ದೈಹಿಕ ಕಿರುಕುಳ ರೈತರಿಗೆ ಇಲ್ಲವೇ ಜನರಿಗೆ ಕೊಡತಕ್ಕದ್ದಲ್ಲ, ಸೂಚನೆ ಮೀರಿ ನಡೆದರೆ ಜಿಲ್ಲಾಡಳಿತ ವ್ಯಗ್ರವಾಗಿ ವರ್ತಿಸಬೇಕಾಗುತ್ತದೆ ಎಂದು ಡಿಸಿ ಗಂಭೀರ ಎಚ್ಚರಿಕೆ ನೀಡಿದರು. ಹಿಂದೆಂದೂ ಕಂಡು ಕೇಳರಿಯದ ಪ್ರವಾಹಕ್ಕೆ ಬೆಳಗಾವಿ ಜಿಲ್ಲೆ ತಥರಿಸಿ ಜನ ಬೀದಿಗೆ ಬಿದ್ದಿದ್ದು, ಕಣ್ಣಿಗೆ ಕಂಡರೂ ಬ್ಯಾಂಕ್, ಫೈನಾನ್ಸ್, ಸೊಸೈಟಿಗಳು, ಸಹಕಾರಿ ಸಂಘಗಳು, ಕೈಗಡ ಸಾಲ ಕೊಟ್ಟವರು ಮತ್ತಿತರ ಎಲ್ಲ ಫೈನಾನ್ಸಗಳು ಸಾಲ ವಸೂಲಿಗೆ ಇಳಿಯುವುದು ತರವಲ್ಲ ಎಂದು ಡಾ. ಬೊಮ್ಮನಹಳ್ಳಿ ಸೂಚಿಸಿದರು.

ಗೂಂಡಾಗಿರಿ ಬಿಡಿ: ಏಜೆನ್ಸಿಗಳ ಮೂಲಕ ಗೂಂಡಾಗಳನ್ನು ಹೊತ್ತುಗೊತ್ತಿಲ್ಲದ ಸಮಯ ಮನೆಗಳಿಗೆ ಕಳಿಸಿ ಹಣ ವಸೂಲಿ ಮಾಡುತ್ತಾರೆ. ಮನೆಗಳಿಗೆ ನುಗ್ಗಿ ಗೂಂಡಾಗಿರಿ ಮಾಡುತ್ತಿದ್ದಾರೆ. ಸಹಿ ಮಾಡಿಸಿಕೊಂಡ ಖಾಲಿ ಚೆಕ್ ಗಳ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ಪ್ರಕಾಶ ನಾಯಕ ಜಿಲ್ಲಾಧಿಕಾರಿ ಮುಂದೆ ಆರೋಪಿಸಿದರು. ರಿಕವರಿ ಗ್ಯಾಂಗಗಳ ಹೆಸರಿನಲ್ಲಿ ಗೂಂಡಾಗಳು ಯಾವ ಕಾಯ್ದೆ ಕಾನೂನು ಭಯವಿಲ್ಲದೇ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಹಿಂದೂಜಾ ಫೈನಾನ್ಸ್ ಎಂಬುವುದು ಟ್ರ್ಯಾಕ್ಟರ್ ಸಾಲ ಕೊಟ್ಟು ಕಿರುಕುಳ ನೀಡಿದ ವೃತ್ತಾಂತವೊಙದನ್ನು ಉದಾಹರಣೆ ಆಗಿ ರೈತರು ಪ್ರಸ್ತುತಪಡಿಸಿದರು. ಖಾಸಗಿ ಬ್ಯಾಂಕಗಳು ಗೂಂಡಾ ವೃತ್ತಿಯ ಜನರನ್ನು ತಕ್ಷಣ ಕೈ ಬಿಡಬೇಕು ಎಂದು ಆಗ್ರಹಿಸಿದರು. ಧರ್ಮಸ್ಥಳ ಸಂಘ ಪ್ರವಾಹ ಪೀಡಿತ ಜನರಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದೆ ಎಂದು ಸಭೆಯ ಗಮನ ಸೆಳೆಯಿತು. ಐಸಿಐಸಿ ಬ್ಯಾಂಕ್ ವಿಪರೀತ ಕಿರುಕುಳ ನೀಡುತ್ತಿದೆ. ರೈತರು ಇಲ್ಲವೇ ಜನತೆಯ ಕಡೆ ಸಾಲ ವಸೂಲಾತಿಗೆ ಬಂದರೆ ಜನ ಒಟ್ಟಾಗಿ ಬ್ಯಾಂಕ್ ಅಧಿಕಾರಿಗಳನ್ನು ಕಟ್ಟಿ ಹಾಕಲಾಗುವುದು ಎಂದು ರೈತರು ಘೋಷಿಸಿದ್ದಾರೆ. ಪೊಲೀಸ್ ಕಮಿಷ್ನರ್ ಬಿ. ಎಸ್. ಲೊಕೇಶಕುಮಾರ ಹಾಗೂ ಎಸ್ಪಿ ಲಕ್ಷ್ಮಣ ನಿಂಬರಗಿ ಸಹ ಬ್ಯಾಂಕಗಳಿಗೆ ಎಚ್ಚರಿಕೆ ನೀಡಿದರು. ಎಸಿಪಿ ಎನ್. ವಿ. ಭರಮನಿ, ಆರ್ ಟಿಓ ಶಿವಾನಂದ ಮಗದುಮ ಇತರ ಅಧಿಕಾರಿಗಳು ಭಾಗವಹಿಸಿದ್ದರು.