SHARE

ಬೆಳಗಾವಿ: ಅಗಸ್ಟ 2019 ಮತ್ತು ಸಪ್ಟೆಂಬರ 2019ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಪ್ರವಾಹದಿಂದ 872 ಗ್ರಾಮಗಳಲ್ಲಿ ಬಾಧಿತವಾಗಿರುತ್ತವೆ. 1,12,702 ಕುಟುಂಬಗಳು ಬಾಧಿತವಾಗಿವೆ. ಬೆಳಗಾವಿ ಜಿಲ್ಲೆಗೆ ಅತಿವೃಷ್ಟಿ/ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ರೂ.167.00 ಕೋಟಿ, ಹಾನಿಗೊಳಗಾದ ಮನೆಗಳಿಗೆ ಪರಿಹಾರ ವಿತರಿಸಲು ರೂ.500.00 ಕೋಟಿ ಹಾಗೂ ಮೂಲಭೂತ ಸೌಕರ್ಯಗಳ ದುರಸ್ತಿ ಕುರಿತು ರೂ.200.00 ಕೋಟಿ ಹೀಗೆ ಒಟ್ಟು ರೂ.867.00 ಕೋಟಿ ಅನುದಾನವು ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾಗೂ ಪ್ರವಾಹದಿಂದ ಬಟ್ಟೆ ಹಾಗೂ ಗೃಹಬಳಕೆ ವಸ್ತುಗಳು ಹಾನಿಯಾದ ಒಟ್ಟು 1.12 ಲಕ್ಷ ಕುಟುಂಬಗಳ ಪೈಕಿ 1.12 ಲಕ್ಷ ಕುಟುಂಬಗಳಿಗೆ ತಲಾ ರೂ. 10 ಸಾವಿರದಂತೆ ಪರಿಹಾರ ಧನವನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾಗೂ ಪ್ರವಾಹದಿಂದಾಗಿ ಭಾದಿತರಾದ ಸಂತ್ರಸ್ತರಿಗೆ 10 ಕೆ.ಜಿ ಅಕ್ಕಿ, 01 ಕೆಜಿ ತೊಗರಿ ಬೇಳೆ, 01 ಕೆ.ಜಿ ಸಕ್ಕರೆ, 01 ಕೆ.ಜಿ ಉಪ್ಪು, 01 ಲೀಟರ್ ಪಾಮ್ ಎಣ್ಣೆ, 05 ಲೀಟರ್, ಸೀಮೆ ಎಣ್ಣೆ ಒಳಗೊಂಡ ವಿಶೇಷ ಆಹಾರ ಕಿಟ್‍ಗಳನ್ನು 1,08,268 ಕುಟುಂಬಗಳಿಗೆ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 69381 ಮನೆಗಳು ಹಾನಿಗೊಳಗಾಗಿರುತ್ತವೆ. ಅವುಗಳಲ್ಲಿ ದಾಖಲೆ ಸರಿ ಇರುವ 57432 ಮನೆಗಳ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸಿದೆ ಎಂದರು.

ತಂತ್ರಾಂಶದಲ್ಲಿ ದಾಖಲಿಸಿದ ಮನೆಗಳ ಪೈಕಿ ದಾಖಲೆ ಸರಿ ಇರುವ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಮೊದಲ ಕಂತಾಗಿ 1 ಲಕ್ಷ ರೂಗಳನ್ನು ಹಾಗೂ ಭಾಗಶ: ಹಾನಿಗೊಳಗಾದ ಮನೆಗಳಿಗೆ ಮೊದಲ ಕಂತಾಗಿ 25,000 ರೂ ಮತ್ತು ಅಲ್ಪಸ್ವಲ್ಪ ಹಾನಿಗೊಳಗಾದ ಮನೆಗಳಿಗೆ ಪೂರ್ಣ ಪರಿಹಾರವಾಗಿ 25,000 ರೂಗಳಂತೆ ಒಟ್ಟು 25072 ಮನೆಗಳಿಗೆ 78.87 ಕೋಟಿ ರೂಗಳ ಪರಿಹಾರ ಧನವನ್ನು ಫಲಾನುಭವಿಗಳ ಬ್ಯಾಂಕ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಈ ಎಲ್ಲ ಮನೆಗಳ ಪುನರ್ ನಿರ್ಮಾಣ ಹಾಗೂ ದುರಸ್ತಿಗಾಗಿ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ ಎಂದರು.

ಇನ್ನೂಳಿದ ಫಲಾನುಭವಿಗಳ ದಾಖಲೆ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದ್ದು, ದಾಖಲೆ ಸರಿಯಿರುವ ಫಲಾನುಭವಿಗಳಿಗೆ ಪರಿಹಾರ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಹಾನಿಗೊಳಗಾದ ಮನೆಗಳ ಮೇಲಿನ ಎಲ್ಲ ಮಾಹಿತಿ ರಾಜೀವ ಗಾಂಧಿ ವಸತಿ ನಿಗಮ ನಿಯಮಿತ ಬೆಂಗಳೂರು ಇವರ ವೆಬ್‍ಸೈಟನಲ್ಲಿ ಲಭ್ಯವಿರುತ್ತದೆ.

ಫಲಾನುಭವಿಗಳು ತಮ್ಮ ಬ್ಯಾಂಕ ಖಾತೆಗಳನ್ನು ಪರಿಶೀಲಿಸಿಕೊಳ್ಳಬೇಕು. ಎ ಮತ್ತು ಬಿ ವರ್ಗದ ಮನೆಗಳ ಮಾಲೀಕರು ತಮ್ಮ ಖಾತೆಗಳಿಗೆ ಪರಿಹಾರ ಧನ ಜಮೆಯಾದವರಿಗೆ ಈಗಾಗಲೇ ರಾಜೀವ ಗಾಂಧಿ ವಸತಿ ನಿಗಮದಿಂದ ಕಾರ್ಯಾದೇಶ ಗ್ರಾಮ ಪಂಚಾಯತಿ ಪಿಡಿಓರವರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಲಾಗಿನ್‍ನಲ್ಲಿ ಸೃಜನೆ ಆಗಿರುತ್ತದೆ. ಅದರಂತೆ ಎ, ಬಿ ವರ್ಗೀಕರಣದಲ್ಲಿನ ಹಾನಿಗೊಳಗಾದ ಮನೆಗಳ ಫಲಾನುಭವಿಗಳು ಮನೆಯ ನಿರ್ಮಾಣ/ ದುರಸ್ತಿ ಕಾಮಗಾರಿಯನ್ನು ಪ್ರಾರಂಭಿಸಬೇಕು. ಮೊದಲನೆ ಹಂತ ಪೂರ್ಣಗೊಳಿಸಿ, ಈ ಕುರಿತು ಭಾವಚಿತ್ರಗಳನ್ನು ಅಪಲೋಡ ಮಾಡಿದಲ್ಲಿ ಮುಂದಿನ ಕಂತಿನ ಅನುದಾನ ಬಿಡುಗಡೆಯಾಗುತ್ತದೆ. ಅತಿವೃಷ್ಟಿ/ಪ್ರವಾಹದಿಂದ ಕೃಷಿ ಜಮೀನುಗಳಲ್ಲಿ ಹೊದಿಕೆಯಾದ ಮರಳು/ಹೂಳನ್ನು ನಿರ್ಜಲೀಕರಣ, ಭೂ ಕುಸಿತದಿಂದ ಆದ ಭೂಮಿ ನಷ್ಟದ ಕುರಿತು ಹಾಗೂ ಬೆಳೆ ಹಾನಿಯ ಜಂಟಿ ಸಮೀಕ್ಷಾ ಕಾರ್ಯವು ಪೂರ್ಣಗೊಂಡಿದ್ದು, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ 6.99 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ ಪ್ರವಾಹದಿಂದ ಹಾಗೂ ಅತಿವೃಷ್ಟಿಯಿಂದ 2.21 ಲಕ್ಷ ಹೆಕ್ಷೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆಗೆ ಹಾನಿಯಾಗಿರುತ್ತದೆ. ಈ ಹಾನಿಯ ಜಂಟಿ ಸಮೀಕ್ಷೆ ಪೂರ್ಣಗೊಂಡಿರುತ್ತದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.