SHARE

ಬೆಳಗಾವಿ: ಮಹಾತ್ಮ ಗಾಂಧೀಜಿ ಅವರ ವಿಚಾರಗಳನ್ನು, ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಎಂತಹ ಕಠಿಣ ಪರಿಸ್ಥಿತಿಯಲ್ಲಿ ಸಹ ಉತ್ತಮ ಬದಕನ್ನು ಕಟ್ಟಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ ಬೊಮ್ಮನಹಳ್ಳಿ ಅವರು ಹೇಳಿದರು. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ವಾತಂತ್ರ್ಯ ಸೈನಿಕ ಉತ್ತರಾಧಿಕಾರಿಗಳ ಸಂಘ, ಭಾರತೀಯ ಅಂಚೆ ಸೇವೆ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ
ಬುಧವಾರ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ಧೂರ ಶಾಸ್ತ್ರಿ ಅವರ 115ನೇ ಜಯಂತಿ
ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಗಾಂಧೀಜಿಯವರ ಮಾರ್ಗಗಳಲ್ಲಿ ಪ್ರತಿಯೊಬ್ಬರು ಒಂದೊಂದು ಮಾರ್ಗಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು. ಗಾಂಧೀಜಿಯವರ ಆದರ್ಶಗಳನ್ನು ಸರಿಯಾದ ರೀತಿಯಲ್ಲಿ ನಾವು ಪಾಲನೆ ಮಾಡಿದ್ದೇ ಆದರೆ ಅವರಿಗೆ ನಾವು ನಿಜವಾದ ಗೌರವವನ್ನು ನೀಡಿದಂತಾಗುತ್ತದೆ ಎಂದು ಹೇಳಿದರು.ನಂತರ ಮಾತನಾಡಿದ ಉತ್ತರ ವಲಯದ ಆರಕ್ಷಕ ಮಹಾ ನಿರೀಕ್ಷಕರಾದ ಎಚ್. ಜಿ. ರಾಘವೇಂದ್ರ ಸುಹಾಸ ಅವರು ಮಾತನಾಡಿ ಗಾಂಧೀಜಿ ಅವರ ಆಚಾರ ವಿಚಾರ, ತ್ಯಾಗ ಬಲಿದಾನ, ಜೀವನ ಶೈಲಿ, ಸತ್ಯ ಅಹಿಂಸೆ ಎಲ್ಲ ಯುಗಕ್ಕೂ ಮಾದರಿಯಾಗುತ್ತದೆ ಎಂದು ಹೇಳಿದರು. ಗಾಂಧೀಜಿಯವರ ವಿಚಾರ ಹಾಗೂ ತತ್ವಾದರ್ಶಗಳು ದಿನದಿಂದ ದಿನಕ್ಕೆ ಪ್ರಬಲ ಶಕ್ತಿಯನ್ನು ಪಡೆದುಕೊಳ್ಳುತ್ತದೆ ಎಂದು ಅವರು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಪ್ರತಿಯೊಬ್ಬ ನಾಗರಿಕರು ಸಾಮಾಜಿಕ ಸಾಮರಸ್ಯ, ಸರಳ ಜೀವನ ನಡೆಸಬೇಕು ಎಂದು ಆಶಯ ವ್ಯಕ್ತ ಪಡಿಸಿದರು.

ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಮಾತನಾಡಿ ಇತಿಹಾಸವನ್ನು ಮೆಲುಕು ಹಾಕಿದಾಗ ಪ್ರಭುತ್ವವಾದ ಹೋರಾಟ ಮಾಡಿದವರು ಬಸವಣ್ಣ ಅದೇ ರೀತಿಯಾಗಿ ಭಾರತದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಮೊದಲಿಗರು ಗಾಂಧೀಜಿಯವರು ಎಂದು ಹೇಳಿದರು. ಗಾಂಧೀಜಿ ಅವರ ವಿಚಾರ ನೀತಿ ಆದರ್ಶಗಳನ್ನು ಹಾಗೂ ತತ್ವಗಳನ್ನು ಅಳವಡಿಸಿಕೊಳ್ಳುವಲ್ಲಿ ನಾವು ಸೋತಿದ್ದೆವೆ ಎಂದು ಹೇಳಿದರು. ದಕ್ಷಿಣ ಆಫ್ರಿಕಾದ ಗುಲಾಮಗಿರಿ ಪದ್ದತಿಯನ್ನು ನಿರ್ಮೂಲನೆ ಮಾಡಿದ
ಕೀರ್ತಿ ಗಾಂಧೀಜಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಆಂಗ್ಲ ಭಾಷೆಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನಾಗರತ್ನಾ ಪರಾಂಡೆ ಅವರು ಮಾತನಾಡಿ ಒಬ್ಬ ವ್ಯಕ್ತಿಯನ್ನು ಸರಿಯಾಗಿ ತಿಳಿದುಕೊಳ್ಳಬೇಕೆಂದರೆ ಗಾಂಧೀಜಿ ಅವರ ಸರಳ ಜೀವನ ಸಜ್ಜನಿಕೆ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬ ನಾಗರಿಕನೂ ಅಳವಡಿಸಿಕೊಳ್ಳಬೇಕು ಎಂದರು. ಗಾಂಧೀಜಿ ಅವರು ಒಬ್ಬ ಚಿಂತಕ, ಕವಿ ಲೇಖಕ, ಬರಹಗಾರ, ಸಾಮಾಜಿಕ ಹೋರಾಟಗಾರರು ಹಾಗಾಗಿ ದೇಶದ ಸರ್ವತೋಮುಕ ಅಭಿವೃದ್ಧಿಯಾಗಬೇಕಾದರೆ ಅವರ ವಿಚಾರಗಳನ್ನು ತಿಳಿದುಕೋಳ್ಳಬೇಕು ಎಂದು ಹೇಳಿದರು.ಒಂದು ಸಮಾಜ ಅಭಿವೃದ್ಧಿ ಆಗಬೇಕಾದರೆ ವ್ಯಕ್ತಿಯಲ್ಲಿ ಜಾತಿ ಭೇದಭಾವ ಕಿಳರಿಮೆ ಇರಬಾರದು ಹಾಗೂ ಗಾಂಧೀಜಿಯವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಪ್ರಮುಖ ಗುರಿಯಾಗಿರಬೇಕು ಎಂದು ತಿಳಿಸಿದರು. ಶಿಕ್ಷಣ ಒಂದು ಸಾಧನ ಇದನ್ನು ಉತ್ತಮ ರೀತಿಯಲ್ಲಿ ಪಡೆದಿದ್ದೆ ಆದರೆ ಖಂಡಿತವಾಗಿಯು ನಾವು ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದಕಲು ಸಾಧ್ಯ ಎಂದರು. ವಿಶೇಷ ಅಂಚೆ ಲಕೊಟೆ ಬಿಡುಗಡೆ ಹಾಗೂ ಪಾಪುಬಾಪು ಕಿರುಪುಸ್ತಕವನ್ನು ಹಿರಿಯ ಗಾಂಧಿವಾದಿ ಸದಾಶಿವ ಭೋಸಲೆ ಅವರು ಬಿಡುಗಡೆಗೊಳಿಸಿದರು. ಮಹಾತ್ಮಾ ಗಾಂಧೀಜಿ ಜೀವನ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು. ಮಹಾಂತೇಶ ನಗರದ ಪ್ರೌಢಶಾಲೆಯ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ನಡೆಸಿಕೊಟ್ಟರು. ಸ್ವರಾಂಜಲಿ ಸಂಗೀತ ವಿದ್ಯಾಲಯದ ಮೋರೆ ಅವರ ನೇತೃತ್ವದ ತಂಡದವರು ಗಾಂಧೀಪ್ರಿಯ ಭಜನ್‍ಗಳನ್ನು ಪ್ರಸ್ತುತಪಡಿಸಿದರು.