SHARE

ಬೆಳಗಾವಿ: ಪ್ರವಾಹ ಪರಿಸ್ಥಿತಿಗೆ ನಲುಗಿರುವ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯೋತ್ಸವದಲ್ಲಿ ಈ ಬಾರಿ ಹೋಳಿಗೆ ಊಟ ಮಾಡುವಂತಿಲ್ಲ ಎಂದು ಕನ್ನಡ ಸಂಘಟನೆಗಳು ಸ್ವಯಂ ನಿರ್ಧಾರ ಪ್ರಕಟಿಸಿವೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ
ಇಂದಿನ ರಾಜ್ಯೋತ್ಸವ ಪೂರ್ವಭಾವಿ ತಯಾರಿ ಸಭೆಯಲ್ಲಿ ಪ್ರತಿವರ್ಷದಂತೆ ರಾಜ್ಯೋತ್ಸವ ನಡೆಯುತ್ತದೆ, ಆದರೆ ವಿಜೃಂಭಣೆ ನೆಪದಲ್ಲಿ ಪ್ರವಾಹ ಸಂತ್ರಸ್ತರಿಗೆ ನೋವಾಗದಂತೆ ವರ್ತಿಸುವ ಮೇರೆ ಹಾಕಿಕೊಂಡಿವೆ. ಡಾಲ್ಬಿ ಸೌಂಡ್ ಸಿಸ್ಟಮ್ ಬಳಕೆ, ಸಿಹಿಊಟ ಮತ್ತಿತರ ವಿಷಯಗಳಲ್ಲಿ ಸಂಯಮ ‌ಕಾಯ್ದುಕೊಳ್ಳಲು ತೀರ್ಮಾನಿಸಲಾಯಿತು.

ಹೊಸ ಕೇಂದ್ರ ಬಸ್ ನಿಲ್ದಾಣಕ್ಕೆ ಕಿತ್ತೂರು ಚನ್ನಮ್ಮ ಹೆಸರು ಇಡುವುದು, ಗಡಿ ಕನ್ನಡ ಭವನ ತೆರೆದು ಬಳಕೆಗೆ ತರಲು ಸರ್ವೋದಯ ಸ್ವಯಂ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ತಾಳೂಕರ ಆಗ್ರಹಿಸಿದರು. ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾವುದೇ ಶಾಸಕರು, ಸಂಸದರು & ಹಲವು ಅಧಿಕಾರಿಗಳು ಬರುವುದಿಲ್ಲ ಎಂದು ಕನ್ನಡ ಹೋರಾಟಗಾರರು ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದರು. ಡಾಲ್ಭಿ ಸೌಂಡ್ ಸಿಸ್ಟಮ್ ಆದಷ್ಟು ಬಳಸದಿರಲು ಸಭೆ ಈ ಬಾರಿ ತೀರ್ಮಾನಿಸಿದೆ. ಈ ಹಿಂದೆ ಆಯೋಜಿಸಿದ್ದ ಹೆಲಿಕಾಫ್ಟರ್ ಪುಷ್ಪವೃಷ್ಟಿ ಈ ಬಾರಿಯೂ ಆಯೋಜಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ. ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ, ಡಿಸಿಪಿ ಸೀಮಾ ಲಾಟಕರ, ಎಡಿಸಿ ಅಶೋಕ ದುಡಗುಂಟಿ, ಕಮಿಷನರ್ ಕೆ. ಎಚ್. ಜಗದೀಶ, ಅಶೋಕ ಚಂದರಗಿ, ಸಿದ್ದನಗೌಡ ಪಾಟೀಲ, ಅನಂತಕುಮಾರ ಬ್ಯಾಕೂಡ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಇತರರು ಉಪಸ್ಥಿತರಿದ್ದರು