SHARE

ನವದೆಹಲಿ: ಇಡೀ ದೇಶವೇ ಕಾಯುತ್ತಿರುವ ಅಯೋಧ್ಯಾ ವಿವಾದದ ತೀರ್ಪು ಶನಿವಾರ ಹೊರಗೆ ಬರಲಿದೆ. ಶನಿವಾರ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟವಾಗಲಿದೆ. 5 ಸದಸ್ಯರ ಸುಪ್ರಿಂ ಕೋರ್ಟ್ ನ್ಯಾಯಾಧೀಶರ ತಂಡ ತೀರ್ಪು ನೀಡುತ್ತಿದೆ.

ಈಗಾಗಲೇ ಅಯೋಧ್ಯೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 4000 ಹೆಚ್ಚುವರಿ ಅರೆಸೇನಾಪಡೆಗಳನ್ನು ರವಾನಿಸಲಾಗಿದೆ. ಅಲ್ಲದೆ ಸಿಆರ್‌ಪಿಎಫ್, ಕಮಾಂಡೋ ಪಡೆಗಳನ್ನು ಸಹ ನಿಯೋಜಿಸಲಾಗಿದೆ.

ಅಯೋಧ್ಯಾ ತೀರ್ಪು ಯಾವುದೇ ಕ್ಷಣದಲ್ಲಿ ಹೊರಬರುವ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಳೆದ ಒಂದು ವಾರದಿಂದಲೇ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿತ್ತು. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲಾಗಿದೆ. ಎಲ್ಲೆಡೆ ಕ್ರಿಮಿನಲ್ಸ್ ಗಳ ಮೇಲೆ ಎಚ್ಚರ ವಹಿಸಲಾಗಿದೆ. ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಶಾಂತಿ ಸಭೆಗಳನ್ನು ನಡೆಸಲಾಗಿದೆ. ಯಾವುದೇ ರೀತಿಯಲ್ಲಿ ಸೌಹಾರ್ದತೆ ಕೆಡಿಸಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಇದೀಗ ನಾಳೆಯೇ ತೀರ್ಪು ಪ್ರಕಟವಾಗಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ.