SHARE

ಹುಬ್ಬಳ್ಳಿ: ಮನೆ ಕಳ್ಳತನ ಮಾಡುತ್ತಿದ್ದ ಮೂರು ಜನ ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಕೇಶ್ವಾಪೂರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ರಮೇಶ ಲಕ್ಷ್ಮಣ ಕಾಳೆ, ಸುರೇಶ ಗಂಗಾರಾಮ ದೌಲತ್, ಅಪ್ಪಾ ದೌಲತ್ ಚವ್ಹಾಣ ಎಂಬುವವರೇ ಬಂಧಿತ ಆರೋಪಿಗಳು. ಸುಮಾರು ದಿನಗಳಿಂದ ಹು-ಧಾ ಮಹಾನಗರದಲ್ಲಿ ಕೀಲಿ ಹಾಕಿದ ಮನೆಗಳಿಗೆ ಹೋಗಿ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಮಾಹಿತಿ ಮೇರೆಗೆ ಹು-ಧಾ ಮಹಾನಗರ ಪೊಲೀಸ್ ಕಮಿಷನರ್ ಆರ್.ದೀಲಿಪ್, ಡಿಸಿಪಿ ನಾಗೇಶ ಡಿ.ಎಲ್.ಎಸಿಪಿ ಶಂಕರ ರಾಗಿ ಮಾರ್ಗದರ್ಶನದಲ್ಲಿ ತಂಡವೊಂದನ್ನು ರಚಿಸಿಕೊಂಡ ಕೇಶ್ವಾಪೂರ ಪೊಲೀಸ್ ಠಾಣೆಯ ಅಧಿಕಾರಿಗಳಾದ ಸುರೇಶ ಕುಂಬಾರ, ಸಚಿನ ದಾಸರೆಡ್ಡಿ, ಬಿ.ಬಿ.ಹಾದಿಮನಿ ನೇತೃತ್ವದಲ್ಲಿ ಮೂವರು ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 2,75,200 ಮೌಲ್ಯದ ಚಿನ್ನಾಭರಣ ಹಾಗೂ 20,000 ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಹು-ಧಾ ಮಹಾನಗರ ಪೊಲೀಸ್ ಆಯುಕ್ತರಾದ ಆರ್.ದೀಲಿಪ್ ಬಹುಮಾನ ಘೋಷಣೆ ಮಾಡಿದ್ದಾರೆ.