SHARE

ಬೆಳಗಾವಿ: ಬುಡಾ ಮೂಲಕ ಮಾಡಲಾಗಿದ್ದ ಸ್ಕೀಂ ನಂ. 61 ಜಮೀನು ಹಸ್ತಾಂತರ ಪಡೆಯುವ ಪ್ರಕ್ರಿಯೆಯಲ್ಲಿ ಇಂದು ಬುಡಾ ಯಶಸ್ವಿಯಾಗಿದೆ. ಇಂದು ಕಣಬರಗಿ ರಸ್ತೆಯ ನಿಯೋಜಿತ ಹೊಲಗಳಿಗೆ ಪೊಲೀಸ್ ಬಂದೋಬಸ್ತನಲ್ಲಿ ತೆರಳಿದ ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಅವರಿಗೆ ರೈತರು ಹೂಗುಚ್ಛ ನೀಡಿ ತಮ್ಮ ಜಮೀನು ಹಸ್ತಾಂತರಿಸಿದರು.

ಕಳೆದ 2007ರಲ್ಲಿ ಮಾಡಲಾದ ಯೋಜನೆ ಇಲ್ಲಿಯವರೆಗೆ ಕುಂಟುತ್ತ ಸಾಗಿತ್ತು. 160ಎಕರೆ ಯೋಜನಾ ಪ್ರದೇಶದ ಪೈಕಿ ಸುಮಾರು 20ಎಕರೆಯ 14ರಿಂದ 15ರೈತರು ಕೋರ್ಟ್ ಮೊರೆ ಹೋಗಿದ್ದರಿಂದ ಬುಡಾ ಸ್ಕೀಂ ನೆನೆಗುದಿಗೆ ಬಿದ್ದಿತ್ತು. ಇಂದು ಯೋಜನಾ ಪ್ರದೇಶದ ಹೊಲಗಳಿಗೆ ತೆರಳಿದ ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಇನ್ನುಳಿದ ರೈತರಿಂದ ಅವರ ಒಪ್ಪಿಗೆಯ ಸಹಿ ಪಡೆಯುವ ಮೂಲಕ ಸುಮಾರು 120 ಎಕರೆ ಸ್ವಾಧೀನಪಡಿಸಿಕೊಂಡರು.

160 ಎಕರೆ ಒಟ್ಟು ಸ್ವಾಧೀನ ಪ್ರಕ್ರಿಯೆ ಅಡಿಯಲ್ಲಿ ಕೆಲವೇ ಕೆಲವು ರೈತರು ಅಸಹಕಾರ ವ್ಯಕ್ತಪಡಿಸಿದ್ದರಿಂದ ಕಳೆದ ದಶಕದ ಮೇಲ್ಪಟ್ಟು ಬುಡಾ ವಸತಿ ಯೋಜನೆ ನಿಂತಿತ್ತು. ಇನ್ಸಪೆಕ್ಟರ್ ಬಿ. ಆರ್. ಗಡ್ಡೇಕರ, ಪಿಎಸ್ಐ ಆರ್. ಬಿ. ಸೌದಾಗರ, ಸಿದರಾಯಿ ಶೀಗಿಹಳ್ಳಿ, ಬುಡಾ ಅಧಿಕಾರಿ ರಾಘವೇಂದ್ರ ಕಾಮತ ಇತರರು ಉಪಸ್ಥಿತರಿದ್ದರು. ಆಯಾ ಸರ್ವೇ ನಂಬರಗಳಿಗೆ ಬುಡಾ ಅಧಿಕಾರಿಗಳು ರೈತರಿಂದ ಅವರ ಹೊಲದಲ್ಲೆ ಸಹಿ ಪಡೆಯುವ ಮೂಲಕ ಜಮೀನು ಸ್ವಾಧೀನಪಡಿಸಿಕೊಂಡರು. ನ್ಯಾಯಾಲಯದ ಮೊರೆ ಹೋದ ರೈತರ ಜಮೀನು ಸದ್ಯಕ್ಕೆ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಯಿತು. ರೈತರು ಸ್ವಯಂ ಪ್ರೇರೇಯಿಂದ ಇಂದು ಜಮೀನು ಸ್ವಾಧೀನಕ್ಕೆ ಸಹಕರಿಸಿದ್ದರಿಂದ ಸ್ಕೀಂ ಅಭಿವೃದ್ಧಿ ಮಾಡಲು ಸಹಕಾರಿ ಆಗಿದೆ ಎಂದು ಆಯುಕ್ತ ಪ್ರೀತಂ ನಸಲಾಪುರೆ ತಿಳಿಸಿದ್ದಾರೆ.