SHARE

ಬೆಳಗಾವಿ: ಭಾರತದ ಸ್ವಾತಂತ್ರ್ಯಕ್ಕಾಗಿ ಬಹಳಷ್ಟು ಮಹನಿಯರು ತಮ್ಮ ಕುಟುಂಬ ಹಾಗೂ ಪ್ರಾಣ ತ್ಯಾಗ ಮಾಡಿದ್ದಾರೆ. ಅವರೆಲ್ಲರ ತ್ಯಾಗದಿಂದ ನಾವು ಇಂದು ನೆಮ್ಮದಿಯಿಂದ ಉಸಿರಾಡುತ್ತಿದ್ದೇವೆ ಎಂದು ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಹೇಳಿದರು. ನಗರದ ಸಾಂಬ್ರಾದ ರಕ್ಷಕ ಮಾಜಿ ಸೈನಿಕ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ 71 ನೇ ಗಣರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಸಿಕ್ಕ ಮೇಲೆ ನಮ್ಮದೇ ಆದ ಸಂವಿಧಾನವನ್ನು ರಚನೆ ಮಾಡಿಕೊಂಡು, ಸಂವಿಧಾನ ಅರ್ಪಣೆ ಮಾಡಿಕೊಂಡ ದಿನ ಇದಾಗಿದೆ. ಜಗತ್ತಿನ ಎಲ್ಲ ಸಂವಿಧಾನಗಳಿಗಿಂತ್ತ ಅತ್ಯಂತ ಶ್ರೇಷ್ಠ ಸಂವಿಧಾನ ನಮ್ಮ ಸಂವಿಧಾನ ಎಂದು ಅಭಿಪ್ರಾಯಪಟ್ಟರು. ದೇಶಕ್ಕೆ ಎಂತಹ ಪರಿಸ್ಥಿತಿ ಬಂದರು ಅದನ್ನು ನಮ್ಮ ಬಗೆಹರಿಸುವ ಮಾರ್ಗಗಳು ನಮ್ಮ ಸಂವಿಧಾನದಲ್ಲಿದೆ. ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳಿವೆ. ಸಂವಿಧಾನವನ್ನು ಗೌರವಿಸಿ ಎತ್ತಿ ಹಿಡಿಯಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿ, ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನು ಸಮರ್ಪಣೆ ಮಾಡಿದ ಗಣ್ಯರನ್ನು ನೆನೆಯುವಂತಹ ಇದಾಗಿದೆ. ಭಾರತ ಪ್ರತಿಯೊಬ್ಬ ಪ್ರಜೆಗೆ ಬದಕುವ ಹಕ್ಕು, ಹಾಗೂ ಸ್ವಾತಂತ್ರ್ಯದ ಹಕ್ಕು, ದೇಶದ ಆಡಳಿತದ ಹಾಗೂ ನಮ್ಮ ರಕ್ಷಣೆ ಬಗ್ಗೆ ನಮ್ಮ ಸಂವಿಧಾನ ತಿಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಕ್ಷಕ ಮಾಜಿ ಸೈನಿಕ ಸೇವಾ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಖವಾಸಪುರ ಅವರು, ಸಂಘದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ರಮಕಾಂತ ಕಂಡಸ್ಕೊಪ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕರಾದ ಶಿವಾಜಿ ಕಾಗಣೇಕರ, ರಕ್ಷಕ ಮಾಜಿ ಸೈನಿಕ ಸೇವಾ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.