SHARE

ಬೆಳಗಾವಿ: ಗ್ರಾಮೀಣ ಮತದಾರ ಕ್ಷೇತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿಯನ್ನು ಸ್ಥಾಪಿಸುವುದಾಗಿ ಚುನಾವಣೆಗೂ ಮುಂಚೆ ನಾನು ನೀಡಿದ್ದ ವಾಗ್ದಾನವನ್ನು ಈಗ ಈಡೇರಿಸುತ್ತಿದ್ದೇನೆ. ಈ ಕ್ಷಣ ನನ್ನ ಪಾಲಿಗೆ ಅತ್ಯಂತ ಅಭಿಮಾನ ಹಾಗೂ ಗರ್ವದ ಕ್ಷಣವಾಗಿದೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿನ ರಾಜಹಂಸಗಢ ಕೋಟೆಯಲ್ಲಿ ಸುಮಾರು ೩.೫ ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾದ ಅಭಿವೃದ್ಧಿ ಕಾಮಗಾರಿಗಳು, ಸುಶೋಭಿಕರಣ ಕೆಲಸ ಹಾಗೂ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಸ್ಥಾಪಿಸುವ ಕೆಲಸಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ತಿಳಿಸಲು ಹಾಗೂ ಆ ಮೂಲಕ ನಮ್ಮ ಅಮೂಲ್ಯ ಪರಂಪರೆಯ ರಕ್ಷಣೆಗಾಗಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ರಾಜಹಂಸಗಡ ಕೋಟೆಯು ಸುವರ್ಣ ವಿಧಾನ ಸೌಧದ ಎದುರಿಗೆ ಇದೆ. ಇಲ್ಲಿ ಸ್ಥಾಪಿಸಲಾಗುವ ೫೦ ಅಡಿ ಎತ್ತರದ ಶಿವಾಜಿ ಮಹಾರಾಜರ ಮೂರ್ತಿಯು ಅಲ್ಲಿಂದಲೂ ಕಾಣಬೇಕು ಹಾಗೆ ನಿರ್ಮಾಣವಾಗಲಿದೆ ಎಂದು ಹೆಬ್ಬಾಳಕರ ಹೇಳಿದರು. ಬರುವ ದಿನಗಳಲ್ಲಿ ಹಂತ ಹಂತವಾಗಿ ಒಟ್ಟಾರೆಯಾಗಿ ೧೫ ಕೋಟಿ ರೂಪಾಯಿಗಳ ಕಾಮಗಾರಿಯನ್ನು ಇಲ್ಲಿ ಕೈಗೊಳ್ಳಲಾಗುತ್ತದೆ. ಕೆಲವೇ ದಿನಗಳಲ್ಲಿ ರಾಜಹಂಸಗಢ ಕೋಟೆಯು ಭವ್ಯವಾದ ಪ್ರವಾಸಿ ತಾಣವಾಗಿ ಮಾರ್ಪಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೆಬ್ಬಾಳಕರ ನುಡಿದರು. ನಾನು ಶಾಸಕಿಯಾಗಿ ೧೮ ತಿಂಗಳ ಅವಧಿಯಲ್ಲಿ ಸುಮಾರು ೧೨೦೦ ಕೋಟಿ ರೂಪಾಯಿಗಳ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ. ನಿಮ್ಮ ಅಭಿಮಾನ ಹಾಗೂ ಪ್ರೀತಿಯನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಅಹೋರಾತ್ರಿ ಶ್ರಮಿಸುತ್ತಿರುವೆ. ಗ್ರಾಮೀಣ ಕ್ಷೇತ್ರದಲ್ಲಿನ ಶೇ.೯೦ ಕ್ಕೂ ಅಧಿಕ ಜನ ಕೃಷಿಯನ್ನು ಅವಲಂಬಿಸಿ ಬದುಕುತ್ತಿರುವುದು ನನಗೆ ಅರಿವಿದೆ. ಹೀಗಾಗಿಯೇ ಕ್ಷೇತ್ರದಲ್ಲಿನ ಕೆರೆಗಳನ್ನು ತುಂಬಿಸುವ ಹಾಗೂ ಬಾಂದಾರ ಮತ್ತು ಡ್ಯಾಂಗಳನ್ನು ನಿರ್ಮಿಸುವ ಕೆಲಸಕ್ಕೆ ಅತಿ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದೇನೆ. ಇನ್ನೊಂದು ವರ್ಷದಲ್ಲಿ ಕ್ಷೇತ್ರದ ಸುಮಾರು ೮೩ ಹಳ್ಳಿಗಳಿಗೆ ಮಲಪ್ರಭಾ ನದಿಯಿಂದ ನೀರು ಪೂರೈಸುವ ಯೋಜನೆ ಕಾರ್ಯಗತಗೊಳ್ಳಲಿದೆ. ಇದರಿಂದ ಹಳ್ಳಿಗಳ ಕೆರೆಗಳು ತುಂಬಿಕೊಂಡು ಕೃಷಿಕರಿಗೆ ಅನುಕೂಲವಾಗಲಿದೆ ಎಂದು ಹೆಬ್ಬಾಳಕರ ಹೇಳಿದರು. ಈಗ ರಾಜಹಂಸಗಢ ಕೋಟೆಯ ಸುಶೋಭಿಕರಣ ಕೆಲಸ ಆರಂಭಗೊಂಡಿದ್ದು ಕೆಲವೇ ದಿನಗಳಲ್ಲಿ ಇದೊಂದು ತೀರ್ಥಸ್ಥಳದಂತೆ ಕಂಗೊಳಿಸಲಿದೆ ಎಂಬ ಭರವಸೆಯನ್ನು ಲಕ್ಷ್ಮಿ ಹೆಬ್ಬಾಳಕರ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಯೋಜನೆಯ ಪ್ರಸ್ತಾವನೆ ತಯಾರಿಸಿದ ಅಧಿಕಾರಿಗಳು, ಎಂಜಿನಿಯರ್, ಮೂರ್ತಿ ತಯಾರಕರನ್ನು ಸಮಾರಂಭದಲ್ಲಿ ಸತ್ಕರಿಸಲಾಯಿತು. ಮೂರ್ತಿ ತಯಾರಿಸಲು ೫೦ ಲಕ್ಷ ರೂ. ಗಳ ಚೆಕ್ ಅನ್ನು ಮೂರ್ತಿಕಾರ ವಿಕ್ರಮ ಪಾಟೀಲ ಅವರಿಗೆ ಹಸ್ತಾಂತರಿಸಲಾಯಿತು.

ಎಲ್ಲೆಲ್ಲೂ ಭಗವಾ ರಂಗು: ಕೋಟೆಯಲ್ಲಿ ಕಿಕ್ಕಿರಿದು ತುಂಬಿದ್ದ ಎಲ್ಲ ಜನರಿಗೂ ಭಗವಾ ಪೇಟಾ ತೊಡಿಸಿದ್ದರಿಂದ ವಾತಾವರಣ ಸಂಪೂರ್ಣ ಭಗವಾಮಯವಾಗಿತ್ತು. ಶಿವಾಜಿ ಮಹಾರಾಜರ ಜೀವನ ಚರಿತ್ರೆ ಸಾರುವ ಪೋವಾಡಾ ಹಾಗೂ ಝಾಂಜ್ ಪಥಕ್‌ಗಳು ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದವು. ಶ್ರೀರಾಮ ಸೇನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್, ಶಿವಪ್ರತಿಷ್ಠಾನ ಅಧ್ಯಕ್ಷ ಕಿರಣ ಗಾವಡೆ, ಕೋಟೆ ಸಿದ್ಧೇಶ್ವರ ದೇವಸ್ಥಾನದ ಪಂಚಕಮಿಟಿ ಸದಸ್ಯ ಸಿದ್ದಪ್ಪಾ ಛತ್ರೆ, ಸುಳಗಾ ಗ್ರಾಪಂ ಅಧ್ಯಕ್ಷ ಅರವಿಂದ ಪಾಟೀಲ, ಯುವ ಮುಖಂಡ ಮೃಣಾಲ ಹೆಬ್ಬಾಳಕರ ಮುಂತಾದವರು ಉಪಸ್ಥಿತರಿದ್ದರು.