SHARE

ಬೆಳಗಾವಿ: ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆ ಹಿನ್ನೆಲೆಯಲ್ಲಿ ನಿರ್ಮಾಣವಾಗುತ್ತಿರುವ ಜಾತ್ರಿ ಬಂತು ಎಂಬ ಕನ್ನಡ ಕಿರುಚಿತ್ರದಲ್ಲಿ ಮರಾಠಿಯ ಸ್ನೇಹಾ ನಾಗನಗೌಡ ಪಾಟೀಲ ಎಂಬ ಯುವತಿ ಅಭಿನಯಿಸುತ್ತಿದ್ದು, ಇದು ಈ ಭಾಗದಲ್ಲಿ ಸದ್ದು ಮಾಡಿದೆ. ಸ್ಥಳೀಯ ಕಲಾವಿದರನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ಮಾಣ ಆಗುತ್ತಿರುವ ಈ ಕಿರುಚಿತ್ರದಲ್ಲಿ ತಾಲೂಕಿನ ಖನಗಾಂವ ಗ್ರಾಮದ ಸ್ನೇಹಾ ಪಾಟೀಲ ಹಾಗೂ ಕಾಕತಿಯ ಖ್ಯಾತ ರಂಗಭೂಮಿ ಕಲಾವಿದ ಬಾಬಾಸಾಹೇಬ ಕಾಂಬಳೆ, ಸಮೃದ್ಧ ಕಳಸಪ್ಪಗೋಳ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಪತ್ರಕರ್ತ ಭೈರೋಬಾ ಕಾಂಬಳೆ ಹಾಗೂ ಕತೆ, ಚಿತ್ರಕತೆ, ಸಂಭಾಷಣೆಯ, ಮಾರುತಿ ನಿರ್ದೇಶನದ ಶಿವಶೋಭಾ ಸಿನಿ ಫ್ಯಾಕ್ಟರಿ ನಿರ್ಮಿಸುತ್ತಿರುವ ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಜಾತ್ರಿ ಬಂತು ಎಂಬ ಕಿರುಚಿತ್ರದ ಮುಹೂರ್ತ ಸಮಾರಂಭ ದೇವಸ್ಥಾನದ ಆವರಣದಲ್ಲಿ ನೆರವೇರಿತು. ಸುಳೇಭಾವಿ, ಶಿರೂರ ಡ್ಯಾಂ, ಕಲ್ಯಾಳ ಫೂಲ್ ಸೇರಿದಂತೆ ಅನೇಕ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಶ್ರೀ ಶಿವಶೋಭಾ ಸಿನಿ ಫ್ಯಾಕ್ಟರಿ ನಿರ್ಮಿಸುತ್ತಿರುವ ಜಾತ್ರಿ ಬಂತು ಎಂಬ ಕಿರುಚಿತ್ರ ಚಿತ್ರೀಕರಣಕ್ಕೆ ಕ್ಲ್ಯಾಪ್ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಗಜಾನನ ನಾಯ್ಕ, ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವ ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯ ಮಹಾತ್ಮೆ ಸಾರುವ ಕಿರುಚಿತ್ರ ನಿರ್ಮಾಣವಾಗುತ್ತಿದ್ದು, ಈ ಮೂಲಕ ದೇವಿಯ ಶಕ್ತಿ ಇನ್ನಷ್ಟು ಪಸರಿಸಲಿ ಎಂದು ಹೇಳಿದರು. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಅತ್ಯಂತ ಅದ್ಧೂರಿಯಾಗಿ ಜರುಗಲಿದೆ. ಈ ಹಿನ್ನೆಲೆಲಯಲ್ಲಿ ಅತ್ಯಂತ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರ ವಿನೂತನ ಪ್ರಯೋಗವಾಗಲಿದೆ. ಕಲ್ಪವೃಕ್ಷ, ಕಾಮಧೇನು ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ವರ್ಷದ ಜಾತ್ರೆಯಂತೂ ಅತ್ಯಂತ ಅದ್ಧೂರಿಯಾಗಿ ನೆರವೇರಲಿದೆ. ಜಾತ್ರಿ ಬಂತು ಎಂಬ ಕಿರುಚಿತ್ರ ನಿರ್ಮಾಣವಾಗುತ್ತಿರುವುದು ಮೊದಲ ಚಿತ್ರವಾಗಿದೆ. ಗ್ರಾಮದ ಯುವಕರು ಸೇರಿ ಮಾಡಿರುವ ಕಿರುಚಿತ್ರ ಯಶಸ್ವಿಯಾಗಲಿ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಕಿರಣಸಿಂಗ್ ರಜಪೂತ ಮಾತನಾಡಿ, ದೇವಿಯ ಮಹಿಮೆ ಸಾರುವ ಕಿರುಚಿತ್ರ ಯಶಸ್ವಿಯಾಗಲಿದೆ. ಸಿನಿಮಾ ಮಾದರಿಯಲ್ಲಿಯೇ ನಿರ್ಮಾಣವಾಗುತ್ತಿರುವ ಈ ಚಿತ್ರ ಯಶಸ್ವಿಯಾಯಾಗಲಿ. ಸ್ಥಳೀಯ ಕಲಾವಿದರು ಅಭಿನಯಿಸಿದ ಈ ಚಿತ್ರ ಮಾದರಿಯಾಗಿ ಹೊರ ಹೊಮ್ಮಲಿ. ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು. ತಾಪಂ ಸದಸ್ಯ ಬಸನಗೌಡ ಹುಂಕರಿಪಾಟೀಲ ಕ್ಯಾಮರಾ ಚಾಲನೆ ನೀಡಿದರು. ಬಿಜೆಪಿ ಮುಖಂಡ ಭೀಮಶಿ ಭರಮನ್ನವರ ಸ್ಕ್ರಿಪ್ಟ್ ಪೂಜೆ ನೆರವೇರಿಸಿದರು. ಭೈರೋಬಾ ಕಾಂಬಳೆ ಅವರ ಕತೆ, ಚಿತ್ರಕತೆ, ಸಂಭಾಷಣೆ, ಚಂದೂರ ಮಾರುತಿ ನಿರ್ದೇಶಿಸಿದ, ಜೀವಾ ಪ್ರಸನ್ನ ಅವರ ಛಾಯಾಗ್ರಹಣ ಹೊಂದಿರುವ ಕಿರುಚಿತ್ರದಲ್ಲಿ ಕಲಾವಿದರಾದ ಬಾಬಾಸಾಹೇಬ ಕಾಂಬಳೆ, ಸ್ನೇಹಾ ನಾಗನಗೌಡ, ಸಮೃದ್ಧ ಕಳಸಪ್ಪಗೋಳ, ಬಾಲರಾಜ ಭಜಂತ್ರಿ ಅಭಿನಯಿಸಿದ್ದಾರೆ. ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಅಧ್ಯಕ್ಷ ದೇವಣ್ಣ ಬಂಗೇನ್ನವರ, ಮುಖಂಡರಾದ ನಾನಪ್ಪ ಪಾರ್ವತಿ, ಲಕ್ಷ್ಮಣ ಯಮೋಜಿ, ದ್ಯಾಮಣ್ಣ ಮುರಾರಿ, ಅಣ್ಣಪ್ಪ ಪಾಟೀಲ, ಮಹೇಶ ಸುಗಣೆನ್ನವರ, ಗಣಪತಿ ಹೊಸಮನಿ, ಕಲ್ಲಪ್ಪ ರಾಗಿ, ವಿಠ್ಠಲ ಬಂಡೀಗಣಿ, ಕಲ್ಲಪ್ಪ ರಾಗಿ, ಮುರುಗೇಶ ಹಂಪಿಹೊಳಿ, ಶಶಿಕಾಂತ ಸಂಗೊಳ್ಳಿ, ನಿಂಗಪ್ಪ ಚೌಗಲೆ, ಮಾರುತಿ ರವುಳಗೌಡ್ರ, ಕಲ್ಮೇಶ ಪೂಜಾರಿ ಸೇರಿದಂತೆ ಅರ್ಚಕರು, ಗ್ರಾಮಸ್ಥರು ಇದ್ದರು.