SHARE

ಬೆಳಗಾವಿ: ನಿರೀಕ್ಷಿತ ನಾಲ್ಕು ಮಂತ್ರಿ ಸ್ಥಾನದ ಪೈಕಿ ಎರಡು ಮಾತ್ರ ಇಂದಿನ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ದೊರಕಿದ್ದು, ಹಿರಿಯ ರಾಜಕಾರಣಿ ಉಮೇಶ ಕತ್ತಿ ಮತ್ತು ನಂಬಿ ಬಂಡಾಯವೆದ್ದು ಬಂದಿದ್ದ ಮಹೇಶ ಕಮಟಳ್ಳಿ ಅವರಿಗೆ ನಿರಾಶೆಯಾಗಿದೆ. ಕ್ಯಾಬಿನೆಟ್ ಪಟ್ಟ ಪಡೆದ ರಮೇಶ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ ಅವರ ಕ್ಷೇತ್ರದಲ್ಲಿ ಸಂಭ್ರಮ ವ್ಯಕ್ತವಾಯಿತು.ರಮೇಶ ಜಾರಕಿಹೊಳಿ ನಂಬಿ ಮಂತ್ರಿ ಸ್ಥಾನದ ಆಸೆ ಹೊತ್ತಿದ್ದ ಮಹೇಶ ಕಮಟಳ್ಳಿ ಅವರಿಗೆ ಸಿಗದ ಸ್ಥಾನ ಅವರಿಗೂ ಸೇರಿ ಕ್ಷೇತ್ರದಲ್ಲಿ ಜನತೆಗೆ ಇರಿಸುಮುರಿಸು ಉಂಟುಮಾಡಿದೆ. ತಮ್ಮನ್ನು ನಂಬಿ ಬಂದಿದ್ದ ಮಹೇಶ ಕಮಟಳ್ಳಿ ಅವರಿಗೆ ರಮೇಶ ಜಾರಕಿಹೊಳಿ ಸಚಿವ ಸ್ಥಾನ ಕೊಡಿಸದ ಬಗ್ಗೆ ಈಗ ಎಲ್ಲೆಲ್ಲಿಯೂ ಚರ್ಚೆ ವ್ಯಕ್ತವಾಗುತ್ತಿದೆ.

ಹಿರಿಯರಾದ ಉಮೇಶ ಕತ್ತಿ ಹಾಗೂ ಮಹೇಶ ಕಮಟಳ್ಳಿ ಅವರಿಗೆ ಸೇರಿ ಒಟ್ಟು ಆರು ಮಂತ್ರಿ ಸ್ಥಾನ ಜಿಲ್ಲೆಗೆ ದೊರಕಬೇಕಿತ್ತು. ಈ ಬಗ್ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಾತು ಸಹ ಕೊಟ್ಟಿದ್ದರು. ಅದೃಷ್ಟವಶಾತ್ ಫಿನಿಕ್ಸ್ ಪಕ್ಷಿಯಂತೆ ಮತ್ತೆ ಗೆದ್ದು ಬಂದಿದ್ದ ಮಹೇಶ ಕಮಟಳ್ಳಿ ಈಗ ಏಕಾಂಗಿಯಾಗಿದ್ದು ಅವರಿಗೆ ನಿಗಮ ಮಂಡಳಿಯ ಬಿಸ್ಕಿಟ್ ಕೊಡುವ ಭರವಸೆ ಸರಕಾರ ಕೊಟ್ಟಿದ್ದು ಹೊರಬಿದ್ದಿದೆ. ಉಮೇಶ ಕತ್ತಿ ಅವರಿಗೆ ಮುಂದಿನ ದಿನಗಳಲ್ಲಿ ಮಂತ್ರಿ ಭಾಗ್ಯ ಕೊಡುವ ಮುಂದಿನ ಭರವಸೆ ನೀಡಲಾಗಿದ್ದು ಅವರು ಸ್ವೀಕರಿಸುವುದು ಅಸಾಧ್ಯದ ಮಾತು. ಕತ್ತಿ ವ್ಯಗ್ರ ವರ್ತನೆ ಬಿಜೆಪಿಗೆ ಸಂಕಟ ತರಲಿದೆ ಎಂದು ಚರ್ಚೆ ಗರಿಗೆದರಿದೆ.