SHARE

ಬೆಳಗಾವಿ: ಭಾರತೀಯ ಸಂಸ್ಕೃತಿ ಉಳಿಸಿ ದೇಶದ ಅಖಂಡತೆ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಅಪಾರ ಎಂದು ಶಾಸಕ ಅನಿಲ ಬೆನಕೆ ಬಣ್ಣಿಸಿದ್ದಾರೆ. ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹಿಳಾ ಉತ್ಸವ ‘ಸ್ತ್ರೀ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ದೇಶವನ್ನು ಮಾತೆಯೆಂದು ಬಣ್ಣಿಸಲಾಗುತ್ತದೆ. ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲ, ಮುಖ್ಯಮಂತ್ರಿ ಹುದ್ದೆವರೆಗೆ ಮಹಿಳೆಯರು ಏರಿದ್ದಾರೆ. ಪುರುಷಪ್ರಧಾನ ರಾಷ್ಟ್ರ ಎಂದು ಕರೆಸಿಕೊಂಡರೂ ಸಹ ಮಹಿಳೆಯರಿಗೆ ಸಿಗುವ ಗೌರವ ಪ್ರಾಧಾನ್ಯತೆ ಅತಿ ಹೆಚ್ಚಿನದು ಎಂದರು. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದೆ. ಕೆಲವು ಅನಾಚಾರ ಘಟನೆಗಳನ್ನು ಹೊರತುಪಡಿಸಿದರೆ ಸಮಾಜ ಮತ್ತು ನೆಕದ ಕಾನೂನು ಅವರಿಗೆ ರಕ್ಷಣಾತ್ಮಕ ವ್ಯೂಹ ರಚಿಸಿದೆ ಎಂದರು.

ನಮ್ಮ ಬೆಳೆದುಬಂದ ಸಂಸ್ಕೃತಿಗೆ ತದ್ವಿರುದ್ಧ ರೀತಿಯಲ್ಲಿ ಇಂದು ಗಂಡು ಮತ್ತು ಹೆಣ್ಣಿನ ವೇಷಭೂಷಣ ಸ್ವಲ್ಪ ಖೇದ ತರುವಂತಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರು ತೀಕ್ಷ್ಣ ಮತಿಗಳಾದರೂ ಶಿಕ್ಷಣ ಮುಂದುವರೆಸಲು ಸೂಕ್ತ ಬೆಂಬಲ ನಮ್ಮಿಂದ ಸಿಗುತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಇಂದು ಶಾಲಾ ಕಾಲೇಜುಗಳ ಪಕ್ಕ ಅತಿಯಾದ ಮಾದಕವಸ್ತುಗಳ ಮಾರಾಟ ನಡೆಯುತ್ತಿದೆ, ಮಕ್ಕಳು ವಿಧ್ಯಾಭ್ಯಾಸದ ಕಡೆಗೆ ಗಮನ ಕೊಡುತ್ತಿಲ್ಲ. ತಾಯಂದಿರು ಅವರನ್ನು ತಿದ್ದಿತೀಡುವ ಮಹತ್ತರ ಜವಾಬ್ದಾರಿ ವಹಿಸಬೇಕೆಂದು ಕರೆ ನೀಡಿದರು.

ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಹಿಳಾ ಸ್ಟಾಲ್ ಗಳು ಗಮನ ಸೆಳೆದವು. ಸಾಧಕ ಮಹಿಳೆಯರಿಗೆ ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಧ್ಯಾವತಿ ಭಜಂತ್ರಿ, ವಿಜಯಲಕ್ಷ್ಮಿ ಪಾಟೀಲ, ಧನಶ್ರೀ ಸರದೇಸಾಯಿ, ಶಾಂತಾ ಹೆಗಡೆ, ನೀಲಗಂಗಾ ಚರಂತಿಮಠ, ಸರಳಾ ಹೇರೆಕರ, ಗೀತಾ ಸಂಗಮೇಶ ಪ್ರಭಾಕರ, ಪತ್ರಕರ್ತೆಯರಾದ ಸುನಿತಾ ದೇಸಾಯಿ, ಕೀರ್ತಿ ಕಾಸರಗೋಡು, ವೀಣಾ ಶ್ರೀಶೈಲ ಮಠದ, ಸರಳಾ ಹೇರೆಕರ, ಜ್ಯೋತಿ ಭಾವಿಕಟ್ಟಿ ಸೇರಿ ಇತರರು ಉಪಸ್ಥಿತರಿದ್ದರು.