SHARE

ಬೆಳಗಾವಿ: ಬಾಕಿ ಉಳಿದುಕೊಂಡಿರುವ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಖರ್ಚು ಮಾಡಬೇಕು. ಅಭಿವೃದ್ಧಿ ಕೆಲಸಕ್ಕೆ ಬಂದಿರುವ ಅನುದಾನ ಯಾವುದೇ ಕಾರಣಕ್ಕೂ ಹಿಂದಿರುಗಿ ಹೋಗದಂತೆ ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕಾಮಗಾರಿಗಳ ಅನುಷ್ಠಾನಕ್ಕೆ ಮಾರ್ಚ್ ವರೆಗೆ ಕಾಯದೇ ತಮ್ಮ ಇಲಾಖೆಯಲ್ಲಿ ಬಾಕಿ ಉಳಿದುಕೊಂಡಿರುವ ಅನುದಾನವನ್ನು ಖರ್ಚು ಮಾಡಲು ತಕ್ಷಣವೇ ಪ್ರಸ್ತಾವನೆ ಕಳುಹಿಸಿಕೊಡುವಂತೆ ತಿಳಿಸಿದರು. ಮಾರ್ಚ್ ಅಂತ್ಯದಲ್ಲಿ ಬಂದು ಕ್ರಿಯಾಯೋಜನೆ ತಿದ್ದುಪಡಿಗೆ ದುಂಬಾಲು ಬೀಳದAತೆ ಅಧಿಕಾರಿಗಳಿಗೆ ಹೇಳಿದರು. ಅಭಿವೃದ್ಧಿ ಕೆಲಸಕ್ಕೆ ಬಂದಿರುವ ಯಾವದೇ ಅನುದಾನ ಮರಳಿ ಹೋಗಬಾರದು. ಜಿಲ್ಲಾ ಪಂಚಾಯತಿಗೆ ಒಳಪಡುವ ಕೆರೆಗಳಿಗೆ ಒಂದು ವಾರದಲ್ಲಿ ಭೇಟಿ ನೀಡಿ ದುರಸ್ತಿ ಕೆಲಸ ಕೈಗೊಳ್ಳಬೇಕು. ಅಭಿವೃದ್ಧಿ ಕಾಮಗಾರಿ, ಫಲಾನುಭವಿಗಳ ತಲುಪಬೇಕಾದ ಸೌಲಭ್ಯ ಅಥವಾ ಅನುದಾನ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಈ ವೇಳೆ ಮಾತನಾಡಿದ ಸದಸ್ಯರೊಬ್ಬರು, ಜಿಲ್ಲೆಯಲ್ಲಿ ವಿತರಣೆ ಮಾಡಿರುವ ಪಂಪ್ ಸೆಟ್ ಗಳ ಬಗ್ಗೆ ರೈತರಿಂದ ದೂರುಗಳು ಬರುತ್ತಿವೆ. ಆ ಪಂಪ್ ಸೆಟ್ ಗಳ ಗುಣಮಟ್ಟದ ಬಗ್ಗೆ ಅನೇಕ ಕಡೆಗಳಿಂದ ದೂರುಗಳು ಬರುತ್ತಿವೆ. ಅದರ ಬಗ್ಗೆ ಸರಿಯಾದ ಪರಿಶೀಲನೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಪಂಚಾಯತ ಸಿಇಓ ಡಾ.ರಾಜೇಂದ್ರ ಕೆ.ವಿ ಅವರು, ಅಂತಹ ಯಾವದೇ ವಿಷಯಗಳು ಇದ್ದರೆ ಯಾವ ಅಧಿಕಾರಿ ಬೇಜವಾಬ್ದಾರಿ ತೋರಿಸಿರುತ್ತಾರೆ ಅಂತಹ ಅಧಿಕಾರಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಅದೇ ರೀತಿ ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ಬಿಪಿಎಲ್ ಕಾರ್ಡ ಹೊಂದಿರುವ ಜನರಿಗೆ ಮಾರಣಾಂತಿಕ ಕಾಯಿಲೆಗಳು ಬಂದರೆ ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ಮೂಲಕ ಯೋಜನೆಯ ಲಾಭವನ್ನು ಪಡೆಯಲು ಅವಕಾಶವಿದೆ. ಬಿ.ಪಿ.ಎಲ್.ಕಾರ್ಡುದಾರರಿಗೆ ತೊಂದರೆ ಆದರೆ ಆಸ್ಪತ್ರೆಯಲ್ಲಿ ಸರ್ಕಾರಿ ಯೋಜನೆಗಳನ್ನು ತಿಳಿಸುವ ಹೆಲ್ಪ್ ಡೆಸ್ಕ್ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಲಾವುದು ಎಂದು ಅವರು ಎಚ್ಚರಿಕೆ ನೀಡಿದರು.

ಸಾಮಾನ್ಯ ಸಭೆಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ್ಅ ಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಹಂಚಿಕೆಯಾದ ಅನುದಾನ ಸೇರಿದಂತೆ ನೀರಾವರಿ, ಹೆಸ್ಕಾಂ, ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಯಿತು. ಜಿಲ್ಲಾಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.