SHARE

ಬೆಳಗಾವಿ: ದಲಿತ ಸಮುದಾಯ ಸೇರಿದಂತೆ ಎಲ್ಲ ಜನರಿಗೆ ಶಿಕ್ಷಣ, ಉದ್ಯೋಗ, ವಸತಿ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಒದಗಿಸಿಕೊಡಲು ಸರ್ಕಾರ ಬದ್ಧವಿದೆ. ಆದ್ದರಿಂದ ದಲಿತ ಸಮುದಾಯದ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಲು ಸರ್ಕಾರ ಸಿದ್ಧವಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕುರಿತ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾಗುವ ದಲಿತರನ್ನು ರಕ್ಷಿಸುವುದರ ಜತೆಗೆ ಸರ್ಕಾರದ ಯೋಜನೆಗಳ ಲಾಭವನ್ನು ಅರ್ಹರಿಗೆ ತಲುಪಿಸುವ ಕೆಲಸವನ್ನು ಸಮುದಾಯದ ಮುಖಂಡರು ಮತ್ತು ಅಧಿಕಾರಿಗಳು ಮಾಡಬೇಕು ಎಂದು ಅವರು ತಿಳಿಸಿದರು. ದಲಿತರ ಮೇಲಿನ ದೌರ್ಜನ್ಯ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸುವ ಉದ್ಧೇಶದಿಂದ ಸಭೆ ನಡೆಸಲಾಗುತ್ತಿದೆ. ಇಂತಹ ಸಭೆಗಳು ಸಮುದಾಯಕ್ಕೆ ಫಲಪ್ರದವಾಗಿರಬೇಕು ಎಂದು ಸಚಿವರು ತಮ್ಮ ಆಶಯ ವ್ಯಕ್ತಪಡಿಸಿದರು.

ದಲಿತರ ಸ್ಮಶಾನಭೂಮಿ ಅತಿಕ್ರಮಣ-ಪರಿಶೀಲನೆಗೆ ಸೂಚನೆ: ದಲಿತರಿಗೆ ನೀಡಲಾಗಿರುವ ಸ್ಮಶಾನ ಭೂಮಿಯ ಅತಿಕ್ರಮಣ ಆಗಿರುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ತಹಶೀಲ್ದಾರರು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಸವದತ್ತಿ, ಅಥಣಿ, ಬೈಲಹೊಂಗಲ, ಹುಕ್ಕೇರಿ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ದಲಿತರಿಗೆ ಸ್ಮಶಾನ ಭೂಮಿ ಒದಗಿಸು ಪ್ರಸ್ತಾವನೆ ಮತ್ತು ಜಮೀನು ಗುರುತಿಸುವ ಕುರಿತು ಕಳೆದ ಸಭೆಯ ನಡಾವಳಿ ಕುರಿತು ವಿಸ್ತöÈತ ಚರ್ಚೆ ನಡೆಯಿತು. ದಲಿತರಿಗೆ ಸ್ಮಶಾನ ಭೂಮಿ ಇಲ್ಲದಿರುವುದರಿಂದ ಕೆಲವೊಮ್ಮೆ ಅಂತ್ಯಕ್ರಿಯೆ ನಡೆಸುವುದು ಕಷ್ಟಕರವಾಗುತ್ತಿದೆ ಎಂದು ಸದಸ್ಯರ ಅಶೋಕ ಕುಮಾರ್ ಅಸೋದೆ ಅಸಮಾಧಾನ ವ್ಯಕ್ತಪಡಿಸಿದರು.

ವಾಲ್ಮೀಕಿ ತಪೋವನ-ಪ್ರಸ್ತಾವ ಸಿದ್ಧಪಡಿಸಲು ಸೂಚನೆ: ವಾಲ್ಮೀಕಿ ತಪೋವನ ನಿರ್ಮಾಣಕ್ಕೆ ಬೆಳಗಾವಿ ನಗರದಲ್ಲಿ ಜಮೀನು ಲಭ್ಯವಿಲ್ಲದಿರುವುದರಿಂದ ಎಸ್.ಟಿ.ಮೀಸಲು ವಿಧಾನಸಭಾ ಕ್ಷೇತ್ರವಾಗಿರುವುದರಿಂದ ಯಮಕನಮರಡಿ ಕ್ಷೇತ್ರದಲ್ಲಿ ಐದು ಎಕರೆ ಜಾಗೆ ಪಡೆದು ತಪೋವನ ನಿರ್ಮಿಸಬೇಕು ಎಂದು ಸದಸ್ಯ ವಿಜಯಕುಮಾರ್ ತಳವಾರ ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪಿಗೆ ನೀಡಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ನಿಯಮಾವಳಿ ಪ್ರಕಾರ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ತಾಲ್ಲೂಕು ಸಮಿತಿ ಪ್ರಸ್ತಾವ ಸಲ್ಲಿಸಲು ಸೂಚನೆ: ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕುರಿತ ತಾಲ್ಲೂಕು ಮಟ್ಟದ ಸಮಿತಿ ರಚನೆಗೆ ಎಲ್ಲ ತಹಶೀಲ್ದಾರರು ಪ್ರಸ್ತಾವನೆಯನ್ನು ಕಳಿಸಿಕೊಡಲು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಎಲ್ಲ ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ನಿಯಮಿತವಾಗಿ ಸಭೆಯನ್ನು ನಡೆಸಿ, ತಮ್ಮ ಹಂತದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಿಳಿಸಿದರು.

ದೌರ್ಜನ್ಯ ಪ್ರಕರಣ- ಸಮರ್ಪಕ ತನಿಖೆಗೆ ಸೂಚನೆ: ಪರಿಶಿಷ್ಟ ಜಾತಿ/ವರ್ಗಗಳ ಜನರ ಮೇಲಾಗುವ ದೌರ್ಜನ್ಯ ಪ್ರಕರಣಗಳನ್ನು ಸಮರ್ಪಕವಾಗಿ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು. ಹೆಚ್ಚಿನ ಪ್ರಕರಣಗಳಲ್ಲಿ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಸಾಕ್ಷಿದಾರರಿಗೆ ಸೂಕ್ತ ತಿಳಿವಳಿಕೆ ನೀಡುವುದರ ಜತೆಗೆ ಸಾಕ್ಷಿ ಪುನರ್ ಮನನ ಮಾಡಿಕೊಡಲಾಗುತ್ತಿದೆ ಎಂದು ವಿವರಿಸಿದರು. ಪೊಲೀಸರು ಹಾಗೂ ಸರ್ಕಾರಿ ಅಭಿಯೋಜಕರ ನಿರ್ಲಕ್ಷ÷್ಯದಿಂದ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಸದಸ್ಯ ಅಶೋಕ ಕುಮಾರ್ ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಅವರು, ಶೇ.೭೦ ರಷ್ಟು ಸಾಕ್ಷಿಗಳ ವ್ಯತಿರಿಕ್ತ ಹೇಳಿಕೆ; ಶೇ.೧೦ ರಷ್ಟು ತನಿಖಾಧಿಕಾರಿಗಳ ತಪ್ಪಿನಿಂದ ಹಾಗೂ ಶೇ.೧೦ ರಷ್ಟು ಪ್ರಕರಣಗಳು ಅಭಿಯೋಜಕರ ಕಾರಣದಿಂದ ಶಿಕ್ಷೆಯ ಪ್ರಮಾಣ ಕಡಿಮೆ ಕಂಡುಬರುತ್ತಿದೆ ಎಂದು ವಿವರಿಸಿದರು. ನಿರ್ಲಕ್ಷ÷್ಯ ತೋರುವ ತನಿಖಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೂಡ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ದೌರ್ಜನ್ಯ ಪ್ರಕರಣಗಳ ಪ್ರಭಾರಿ ಅಭಿಯೋಜಕ ಪ್ರಾಣೇಶ್ ಭರತನೂರ ಮಾತನಾಡಿ, ದೌರ್ಜನ್ಯ ಪ್ರಕರಣಗಳಲ್ಲಿ ಅತೀ ಹೆಚ್ಚಿನ ಶಿಕ್ಷೆಯಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿವೇತನ ಅರ್ಜಿ ಸ್ವೀಕಾರ ವಿಳಂಬ: ಪ್ರಮುಖ ಎಂಜಿನಿಯರಿAಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಅರ್ಜಿಗಳನ್ನು ಸಮರ್ಪಕವಾಗಿ ಸ್ವೀಕರಿಸಿ ಸಂಬAಧಿಸಿದ ಇಲಾಖೆಗೆ ತಲುಪಿಸುವ ಕೆಲಸವಾಗುತ್ತಿಲ್ಲ ಎಂದು ಸದಸ್ಯ ಅಶೋಕ ಕುಮಾರ್ ದೂರಿದರು. ಈ ರೀತಿಯಲ್ಲಿ ವಿದ್ಯಾರ್ಥಿವೇತನ ಅರ್ಜಿಗಳನ್ನು ಸಮರ್ಪಕವಾಗಿ ತಲುಪಿಸದ ಕಾಲೇಜುಗಳಿಗೆ ಭೇಟಿ ನೀಡಿ ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ, ರವಿ ಕರಲಿಂಗಣ್ಣವರ, ಅಶೋಕ ತೇಲಿ, ವಿವಿಧ ತಾಲ್ಲೂಕುಗಳ ತಹಶೀಲ್ದಾರರು ಹಾಗೂ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಉಮಾ ಸಾಲಿಗೌಡರ ಸಭೆಯನ್ನು ನಿರ್ವಹಿಸಿದರು.