SHARE

ಬೆಳಗಾವಿ: ಭಾನುವಾರ ಸಂಜೆ ಎಂದಿನಂತೆ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದರೆ ಇತ್ತ 15-20 ಜನರ ಯುವಕರ ಗುಂಪೊಂದು ಸಮಾಜ ಕಲ್ಯಾಣ ಇಲಾಖೆಯ ನೆಹರು ನಗರದ ಹಾಸ್ಟೆಲ್ ಮೇಲೆ ಏಕಾಏಕಿ ದೊಣ್ಣೆ-ಬಡಿಗೆ ಗಳೊಂದಿಗೆ ಹಲ್ಲೆ ನಡೆಸಿದ್ದು ವಿದ್ಯಾರ್ಥಿಗಳಲ್ಲಿ ಆತಂಕ ಮನೆಮಾಡಿದೆ. ಸುಮಾರು 15 ಕ್ಕೂ ಹೆಚ್ಚು ಜನರ ಗುಂಪೊಂದು ಸಂಜೆ 7.45 ರ ಸುಮಾರು  ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಇಲ್ಲಿನ ಹಾಸ್ಟೆಲ್ ನಲ್ಲಿ ನುಗ್ಗಿದ್ದು ಹಾಸ್ಟೆಲನ ಗಾಜು ಕಿಟಕಿಗಳನ್ನು ಪುಡಿ-ಪುಡಿ ಮಾಡಿದ್ದಾರೆ.

ಅದೃಷ್ಟವಶಾತ ಈ ಘಟನೆಯಲ್ಲಿ ಯಾವ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗಿಲ್ಲ. ಆದರೆ ಏಕಾಏಕಿ ನಡೆದ ಈ ಬೆಳವಣಿಗೆಯಿಂದ ವಸತಿ ನಿಲಯದ ವಿದ್ಯಾರ್ಥಿಗಳು ಭಯಭೀತಿಗೊಂಡಿದ್ದು ಸ್ಥಳಕ್ಕೆ ದೌಡಾಯಿಸಿದ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿದ್ದು ಈ ಕುರಿತು ತನಿಖೆ ಆರಂಭಿಸಿದ್ದಾರೆ. ವಯಕ್ತಿಕ ದ್ವೇಷದ ಹಿನ್ನಲೆ ಈ ಘಟನೆ ನಡೆದಿದೆಯೋ ಅಥವಾ ಇನ್ಯಾವ ಕಾಣದ ಕೈಗಳು ಇದರ ಹಿಂದೆ ಇವೆಯಾ ಎಂಬ ಸತ್ಯ ತನಿಖೆಯಿಂದಷ್ಟೇ ಹೊರಬೀಳಬೇಕಿದೆ.