SHARE

ಬೆಳಗಾವಿ: ಕಳೆದ ವರ್ಷ ರಾಜ್ಯವನ್ನೇ ತತ್ತರಿಸುವಂತೆ ಮಾಡಿದ್ದ ಪ್ರವಾಹಕ್ಕೆ ಪರಿಹಾರವೂ ಇಲ್ಲ, ಮುಂದೆ ಮತ್ತೆ ಬರಬಹುದಾದ ಪ್ರಕೃತಿ ವಿಕೋಪ ತಡೆಯಲು ಯೋಜನೆಯೂ ಇಲ್ಲ. ಬಹುನಿರೀಕ್ಷಿತವಾಗಿದ್ದ ಈ ಬಜೆಟ್ ಅತ್ಯಂತ ನಿರಾಸೆ ಮೂಡಿಸಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸರಕಾರ ಮಂಡಿಸಲಿರುವ ಈ ವರ್ಷದ ಬಜೆಟ್ ಮೇಲೆ ರಾಜ್ಯದ ಜನರು ಬಹು ನಿರೀಕ್ಷೆ ಇಟ್ಟಿದ್ದರು. 7-8 ತಿಂಗಳಾದರೂ ಸಿಗದ ಪ್ರವಾಹ ಪರಿಹಾರಕ್ಕೆ ಈ ಬಜೆಟ್ ನಲ್ಲಿ ದಾರಿ ತೋರಿಸಬಹುದು. ಸಂಕಷ್ಟದಿಂದ ಸ್ವಲ್ಪವಾದರೂ ಪಾರಾಗಲು ಅವಕಾಶ ಕೊಡಬಹುದು ಎಂದು ಜನರು ಅಂದುಕೊಂಡಿದ್ದರು. ರಾಜ್ಯದ ಬಹುತೇಕ ಭಾಗ, ಅದರಲ್ಲೂ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಪ್ರವಾಹದ ನಂತರ ಪುನಃ ಕಟ್ಟುತ್ತಿದ್ದೇನೆ. ಇದಕ್ಕೆ ಬಜೆಟ್ ನಲ್ಲಿ ಒಂದಿಷ್ಟು ನೆರವಿನ ಯೋಜನೆ ಸಿಗಬಹುದು ಎಂದುಕೊಂಡಿದ್ದೇ. ಆದರೆ ನನ್ನ ಮತ್ತು ಕ್ಷೇತ್ರದ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಮಳೆಗಾಲದಲ್ಲಿ ಅಪ್ಪಳಿಸಿದ್ದ ಪ್ರವಾಹದಿಂದ ಪಾಠ ಕಲಿತು ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ಪ್ರಕೃತಿ ವಿಕೋಪಕ್ಕೆ ಮುನ್ನೆಚ್ಚರಿಕೆ ವಹಿಸುವ ಕೆಲಸವಾಗಬೇಕಿತ್ತು. ಆದರೆ ಅದು ಕೂಡ ಆಗಿಲ್ಲ. ಈ ಬಜೆಟ್ ನಿಂದ ಯಾರಿಗೆ ಅನುಕೂಲವಾಗಲಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಯಾವ ವರ್ಗಕ್ಕೂ ಸಹಾಯ ಮಾಡುವ ಅಂಶಗಳು ಇದರಲ್ಲಿ ಕಾಣುತ್ತಿಲ್ಲ. ರೈತರು, ಕೃಷಿ ಕೂಲಿಕಾರ್ಮಿಕರು, ಬಡವರಿಗೆ ಶಕ್ತಿ ತುಂಬುವ ಯಾವುದೇ ಯೋಜನೆ ಇದರಲ್ಲಿ ಇಲ್ಲ ಎಂದು ಹೆಬ್ಬಾಳಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.