SHARE

ಬೆಳಗಾವಿ: ಹಿಂದೆ ಕಂಡು ಕೇಳರಿಯದ ರೀತಿಯಲ್ಲಿ ಬೆಳಗಾವಿ ನಗರ ಇಂದು ಸ್ತಭ್ದವಾಗಿದ್ದು, ಯಮಸದೃಶ್ಯ ವಾತಾವರಣ ಸೃಷ್ಟಿಯಾಗಿದೆ. ಪ್ರಧಾನಿ ಮೋದಿ ಅವರ ಜನತಾ ಕರ್ಫ್ಯೂ ಗೆ ಜನ ಸ್ಪಂದನೆ ನೀಡಿದ್ದು, ದಿನನಿತ್ಯ ಸಾವಿರಾರು ಜನ ಸಂಚರಿಸುತ್ತಿದ್ದ ರಸ್ತೆಗಳಲ್ಲಿ ನರಪಿಳ್ಳೆ ಸಹ ಇಲ್ಲ. ಬೆಳಿಗ್ಗೆಯಿಂದಲೇ ನಗರದ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ. ಬಿಕೋ ಎನ್ನುವ ರಸ್ತೆಗಳಲ್ಲಿ ಒಬ್ಬರೇ ನಡೆದಾಡಲು ತೀವ್ರ ಭಯವಾಗುವ ಮಟ್ಟಿಗೆ ಪರಿಸ್ಥಿತಿ ಬೆಳಗಾವಿಯಲ್ಲಿ ಕಂಡುಬಂದಿದೆ.

ಬೆಂಗಳೂರಿಂದ ಒಂದು ಹಾಗೂ ಮೈಸೂರಿನ ಒಂದು ಸೇರಿ ಎರಡೇ ಸರಕಾರಿ ಬಸ್ಸುಗಳು ಬೆಳಗಾವಿ ತಲುಪಿದವು. ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಬಂದಿಳಿದ ಕೆಲವು ಜನ ಬಸ್ ನಿಲ್ದಾಣದಲ್ಲೇ ಕುಳಿತರು. ಕೆಲವರನ್ನು ಕರೆದೊಯ್ಯಲು ಅವರವರ ಮನೆಯ ಕಾರು ಬಂದರೂ ಸಹ ಬ್ಯಾಗಗಳಿಗೆ ಸ್ಪ್ರೇ ಮಾಡಿ, ಬಟ್ಟೆ ಬದಲಾಯಿಸಿ, ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸಿದ ನಂತರವೇ ಕಾರಿನಲ್ಲಿ ಏರಿಸಿಕೊಂಡ ದೃಶ್ಯಗಳು ಗಮನ ಸೆಳೆದವು.

ಡೆಟಾಲ್ ಸ್ಪ್ರೇ: ಮಹಾನಗರ ಪಾಲಿಕೆ ಆಯುಕ್ತ ಕೆ. ಎಚ್. ಜಗದೀಶ್ ನೇತೃತ್ವದಲ್ಲಿ ಇಡೀ ನಗರದಾದ್ಯಂತ ವಾಹನಗಳಲ್ಲಿ ಡೆಟಾಲ್ ಸ್ಪ್ರೇ ಮಾಡಲಾಯಿತು. ಬಸ್ ಸ್ಟ್ಯಾಂಡ್, ದೇವಸ್ಥಾನದ ಗ್ರಿಲ್ ಗಳು, ಸಾರ್ವಜನಿಕ ಸ್ಥಳಗಳಲ್ಲಿ ಸ್ಪ್ರೇ ಮಾಡಲಾಯಿತು. ಉತ್ತರದಲ್ಲಿ ಶಾಸಕ ಅನಿಲ ಬೆನಕೆ, ದಕ್ಷಿಣದಲ್ಲಿ ಶಾಸಕ ಅಭಯ ಪಾಟೀಲ ಸಾರ್ವಜನಿಕ ಸ್ಪ್ರೇ ಕೆಲಸಕ್ಕೆ ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ಸಾಥ್ ನೀಡಿದರು.

ಹೊಟೇಲ್, ರೆಸ್ಟೋರೆಂಟ್, ಮಾರ್ಕೆಟ್, ಬಾರ್, ವಾಹನ ಸಂಚಾರ, ಮಾನವ ಸಂಚಾರ ಸೇರಿದಂತೆ ಏನೆಂದರೆ ಏನೇನೂ ಇರಲಿಲ್ಲ. ಪೊಲೀಸರು ಸಹ ರಸ್ತೆಗಳಲ್ಲಿ ಕಾಣಿಸದೇ ಪೊಲೀಸ್ ಠಾಣೆಗಳ ಸಿಸಿಟಿವಿಗಳಲ್ಲಿ ನಗರದ ಚಲನವಲನ ಕಣ್ಣಿಟ್ಟರು. ಇಂದು ಸಂಜೆ 5ಕ್ಕೆ ಸಾರ್ವಜನಿಕರು ತಮ್ಮ ಮನೆಯಿಂದ ಹೊರಬರದೇ ಒಳಗಿದ್ದೇ, ಚಪ್ಪಾಳೆ ಹಾಗೂ ಸಂಗೀತದ ಮೂಲಕ ಅಧಿಕಾರಿಗಳು, ಕಾರ್ಮಿಕರು ಮತ್ತು ಶ್ರದ್ಧಾಳುಗಳಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಮಹಾಮಾರಿ ಕರೋನಾ ಓಡಿಸಲು ಮಾಡಿದ ಪ್ರಧಾನಿ ನರೇಂದ್ರ ಮೋದಿ ‘ಜನತಾ ಕರ್ಫ್ಯೂ’ ಪ್ಲಾನ್ ಗೆ ‘ಜನತಾ ಸಾಥ್’ ಸಿಕ್ಕಿದೆ.