SHARE

ಬೆಳಗಾವಿ: ಕೊರೊನಾ ಹಿನ್ನೆಲೆಯಲ್ಲಿ ೨೧ ದಿನಗಳ ಲಾಕ್ ಡೌನ್ ಜನ ಸಾಮಾನ್ಯ ಊಹಿಸಲಾಧ್ಯವಾಗಿದೆ. ಆದರೂ ಜನ ಹಿತಕ್ಕಾಗಿ ಸರಕಾರದ ಆದೇಶವನ್ನು ಪಾಲಿಸಲೇಬೇಕಾದ ಪರಿಸ್ಥಿತಿ ಭಾರತ ದೇಶದಲ್ಲಿ ಉಂಟಾಗಿದೆ. ಜನಸಾಮಾನ್ಯರ ನೋವು ನಲಿವಿಗೆ ಸ್ಪಂದಿಸುವಲ್ಲಿ ವೈದ್ಯರು, ಅಧಿಕಾರಿಗಳು ಅವಿರತವಾಗಿ ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಜನಸಾಮಾನ್ಯರು ದೈನಂದಿನ ಮೂಲಭೂತ ಅವಶ್ಯಕತೆಗಳನ್ನು ಪಡೆದುಕೊಳ್ಳಲು ಮುಗಿ ಬೀಳುತ್ತಿರುವುದು ಕರ್ನಾಟಕದ ಬೆಳಗಾವಿ ಸೇರಿದಂತೆ ಇತರೆ ಜಿಲ್ಲೆಗಳ ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.ಆದರೆ ಬೆಳಗಾವಿ ಜಿಲ್ಲಾಧಿಕಾರಿಗಳಂತೆ ಬೆಳಗಾವಿ ಉಪವಿಭಾಗಾಧಿಕಾರಿಗಳ ಕಾರ್ಯ ವೈಖರಿ ಇತರರಿಗೆ ಅನುಕರಣೀಯ ಎಂಬಂತೆ ಬಿಂಬಿತವಾಗಿದೆ. ಬೆಳಗಾವಿ ಉಪ ವಿಭಾಗದ ಖಾನಾಪುರ, ಬೆಳಗಾವಿ, ಹುಕ್ಕೇರಿ, ಸಂಕೇಶ್ವರ ಜನತೆಯ ಮೂಲಭೂತ ಅವಶ್ಯಕತೆಗಳನ್ನು ಮನೆ ಮನೆಗೆ ಪೂರೈಸುವಲ್ಲಿ ಅಧಿಕಾರಿಗಳ ತಂಡ ಉತ್ಸುಕರಾದ ಚಿತ್ರಣ thebelagaumnews.com ಪ್ರತಿನಿಧಿಗೆ ಲಭಿಸಿವೆ. ಬೆಳಗಾವಿ ಉಪ ವಿಭಾಗಾಧಿಕಾರಿ ಅಶೋಕ್ ತೇಲಿ ಯವರ ಅಚ್ಚುಕಟ್ಟಿನ ಪೂರ್ವ ಯೋಜನೆಯ ನಿರ್ದೇಶನವನ್ನು ಅವರ ಆಧೀನ ಅಧಿಕಾರಿಗಳು ಪಾಲಿಸುತ್ತಿರುವುದು ಕೆಲ ಬಡಾವಣೆ, ಗಲ್ಲಿಗಳ ಜನಮಾನಸವನ್ನು ಸ್ಪರ್ಶಿಸಿದೆ. ಇಂದು ಮೊದಲ ಹಂತವೆಂಬಂತೆ ಮಾರ್ಕಿಂಗ್ ಮೂಲಕ ಖಾನಾಪುರದಾದ್ಯಂತ ಈ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಇದನ್ನೇ ಇತರೆಡೆ ಜಾರಿಗೆ ತರಲಿದ್ದಾರೆ. ನಿನ್ನೆ ಇಂದು ಖಾನಾಪೂರದಲ್ಲಿ ಉತ್ಸುಕತೆಯಿಂದ ನ್ಯಾಯಬೆಲೆ ಅಂಗಡಿ ದಿನಸಿ, ಕಿರಾಣಿ ಅಂಗಡಿ ದಿನಸಿ, ತರಕಾರಿ ಮಾರುಕಟ್ಟೆ, ಹಾಲು ಹಣ್ಣು ಪೂರೈಕೆ ಮಾಡುವ ಯೋಜನೆ ಸಿದ್ಧವಾಗಿ ಕಾರ್ಯ ಯೋಜನೆಗೆ ಇಳಿದಿದ್ದು ಆರಂಭದ ದಿನವಾದ ಇಂದೇ ಭೇಷ್ ಎನಿಸಿಕೊಂಡಿದ್ದಾರೆ.ಕಾಯಿಪಲ್ಲೆಗೆ ಬಡಾವಣೆಗೊಂದು ತೆವಳು ಗಾಡಿ: ದಿನವೂ ಅಂಗಡಿಗೆ ಕಾಯಿಪಲ್ಲೆ ಮಾರುಕಟ್ಟೆಗೆ ಮುಗಿಬೀಳುವ ಜನರನ್ನು ನಿಯಂತ್ರಿಸುವಲ್ಲಿ ಹೊಸ ಯೋಜನೆಯನ್ನು ರೂಪಿಸಿಕೊಂಡಿರುವ ಉಪ ವಿಭಾಗಾಧಿಕಾರಿ ಅಶೋಕ್ ತೇಲಿ ಅವರ ತಂಡ ಚಕ್ಕಡಿ ಗಾಡಿಗಳ ಮೂಲಕ ಓಣಿಗೊಂದರಂತೆ ನಿಲ್ಲಿಸುವ ಯೋಜನೆ ರೂಪಿಸಿದ್ದು, ತಮ್ಮ ಆಧೀನದ ತರಕಾರಿ ಮಾರುವವರನ್ನೆಲ್ಲ ಕರೆದು ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ. ಅದು ಯಶಸ್ವಿ ಕೂಡ ಆಗಿದೆ.

ಅಂಗಡಿಕಾರ ಮನವೊಲಿಕೆ: ಖಾನಾಪೂರ ನಗರದಲ್ಲೂ ಕಿರಾಣಿ ಅಂಗಡಿಯವರ ಜೊತೆಗೆ ಮಾತನಾಡಿ ಸ್ಥಳೀಯರ ಜೊತೆಗೂಡಿ ಕಾರ್ಮಿಕರ, ಕೂಲಿಕಾರರ, ಕೊಳಗೇರಿ ನಿವಾಸಿಗಳಿಗೆ ದಿನಸಿ ಪೂರೈಕೆಗೆ ಸೂಚಿಸಿದ್ದಾರೆ.