SHARE

ಬೆಳಗಾವಿ: ಪೊಲೀಸರ ಮೇಲೆ ಹಲ್ಲೆ ಆರೋಪದಡಿ ಬಂಧಿತ ಸಿಆರ್​ಪಿಎಫ್​ ಕಮಾಂಡೊ ಸಚಿನ್ ಸಾವಂತ್ ಗೆ ಜಾಮೀನು ದೊರೆತಿದೆ. ಚಿಕ್ಕೋಡಿ ತಾಲೂಕು ಜೆಎಂಎಫ್‌ಸಿ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ. ಕಳೆದ 23ರಂದು ಯಕ್ಸಂಬಾ ಗ್ರಾಮದ ತನ್ನ ಮನೆಯ ಮುಂದೆ ಮಾಸ್ಕ್ ಧರಿಸದೆ ಕಂಡುಬಂದಿದ್ದ ಕಮಾಂಡೊ ಸಚಿನ್ ಅವರನ್ನು ಪೆದೆಗಳಿಬ್ಬರು ಪ್ರಶ್ನಿಸಿ ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆಗೆ ಕಾರಣವಾಗಿತ್ತು.

ಕರ್ತವ್ಯನಿರತ ಪೇದೆಗಳ ಮೇಲೆ ಹಲ್ಲೆ ಮಾಡಿದ ಆರೋಪದಡಿ ಸಚಿನ್ ಸುನೀಲ ಸಾವಂತ ಅವರನ್ನು ಬಂಧಿಸಿ ಕೈಗೆ ಕೋಳ ಹಾಕಿ ಚೈನನಿಂದ ಕಟ್ಟಿ ಠಾಣೆಯಲ್ಲಿ ಕುಳ್ಳಿರಿಸಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಳಿಕ ರಾಷ್ಟ್ರೀಯ ಸುದ್ದಿಯಾಗಿತ್ತು. ಸೈನ್ಯಾಧಿಕಾರಿಗಳು, ನಿವೃತ್ತ ಸೇನಾನಿಗಳು, ರಾಜಕೀಯ ದಿಗ್ಗಜರು ಕೊಳ ತೊಡಿಸಿದ ಕ್ರಮಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದರು. ಸ್ವತಃ ಸಿಆರ್ ಪಿಎಫ್ ಸ್ಪೆಶಲ್ ಡಿಜಿಪಿ ಸಂಜಯ ಅರೋರಾ ಕರ್ನಾಟಕದ ಡಿಜಿಪಿಗೆ ತೀಕ್ಷ್ಣ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಜೊತೆಗೆ ಮಾಸ್ಕ್ ಧರಿಸದ ಕಾರಣದ ಮೇಲೆ ಎಪಿಡೆಮಿಕ್ ಡಿಸಿಸಸ್ ಕಾಯ್ದೆ ಅಡಿ ಸಹ ಪೊಲೀಸರು ಪ್ರಕರಣ ದಾಖಲಿಸಿದ್ದರು. ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಗಳ ನಡುವೆ ಪರಸ್ಪರ ಪ್ರತಿಷ್ಠೆ ಮತ್ತು ಸಂಬಂಧ ಕೆಡುವ ಹಂತಕ್ಕೆ ತಲುಪಿದ್ದ ಮಧ್ಯೆ ಈಗ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್​​ ಈಗಾಗಲೇ ಸಂಪೂರ್ಣ ತನಿಖೆಗೆ ಆದೇಶ ನೀಡಿದ್ದಾರೆ. ಸಿಆರ್ ಪಿಎಫ್ ಮಾಜಿ ಯೋಧರ ಸಂಘಟನೆ ಈಗಾಗಲೇ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಪ್ರಕರಣ ಸುಖಾಂತ್ಯಗೊಳಿಸಲು ಕೋರಿದ್ದು ಗಮನ ಸೆಳೆದಿದೆ.