SHARE

ಬೆಳಗಾವಿ: ಸಮಸ್ತ ಕರ್ನಾಟಕ ವಿಶೇಷವಾಗಿ ಉತ್ತರ ಕರ್ನಾಟಕ ಜಿಲ್ಲೆಗಳ ಜ್ಞಾನ ಅನುಭವ ಹೊಂದಿರುವ ಪ್ರಮುಖ ಕನ್ನಡ ಹೋರಾಟಗಾರ ಅಶೋಕ ವೆಂಕಪ್ಪ ಚಂದರಗಿ ಅವರನ್ನು ಎಂಎಲ್ಸಿ ಮಾಡುವಂತೆ ಕನ್ನಡಪರ ಹೋರಾಟಗಾರರ ಒಕ್ಕೂಟ ಆಗ್ರಹಿಸಿದೆ. ಇಂದು ಸಂಯುಕ್ತ ಸುದ್ದಿಗೋಷ್ಠಿಯಲ್ಲಿ ಕರವೇ ಮಹಾದೇವ ತಳವಾರ ಮತ್ತು ಹಿರಿಯ ಕನ್ನಡ ಮುಖಂಡರು ರಾಜ್ಯ ಬಿಜೆಪಿ ಸರಕಾರ ಮತ್ತು ಎಲ್ಲ ರಾಜಕೀಯ ಪಕ್ಷಗಳನ್ನು ಆಗ್ರಹಿಸಿದ್ದಾರೆ.

ಕನ್ನಡ ನಾಡು-ನುಡಿ, ನೆಲ -ಜಲ ಹಾಗೂ ಸಾಮಾಜಿಕ ಸೇವಾ ವಲಯದಲ್ಲಿ ನೈಜ ಸೇವಕನಾಗಿ ಕಳೆದ ಮೂರು ದಶಕಗಳಿಂದ ದುಡಿಯುತ್ತಿರುವ ಹಿರಿಯ ಬುದ್ದೀಜೀವಿ ಅಶೋಕ ಚಂದರಗಿ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಆಯ್ಕೆ ಮಾಡಬೇಕು. ರಾಮದುರ್ಗ ಮೂಲದವರಾದ ನೇಕಾರ ಮುಖಂಡನಾಗಿಯೂ ಗುರುತಿಸಿಕೊಂಡಿರುವ ಅಶೋಕ ಚಂದರಗಿ ಅವರ ಸೇವೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನುಪಮ ಎಂದರು. ರಾಜಕೀಯ ಬಲಾಢ್ಯರು, ವಂಶಪಾರಂಪರ್ಯ ರಾಜಕೀಯ, ಬಂಡವಾಳಶಾಹಿಗಳನ್ನು ಇತ್ತೀಚೆಗೆ ಚಿಂತಕರ ಚಾವಡಿಗೆ ಆಯ್ಕೆ ಮಾಡುವ ಪರಿಪಾಠ ಬೆಳೆಯುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಬರೀ ದಕ್ಷಿಣ ಕರ್ನಾಟಕದವರೇ ಬುದ್ಧಿವಂತರೆ ಎಂದು ಪ್ರಶ್ನಿಸಿರುವ ಕನ್ನಡ ಸಂಘಟನೆಗಳು ಹಾಗೂ ಸಾಮಾಜಿಕ ಸಂಘಟನೆಗಳ ಒಕ್ಕೂಟ, ಉತ್ತರ ಕರ್ನಾಟಕದ ಹೋರಾಟಗಾರರಿಗೆ ಮೇಲ್ಮನೆ ಸದಸ್ಯತ್ವ ಸಿಗಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯ ಬಿಜೆಪಿ ಸರಕಾರ ಮತ್ತು ಇತರ ರಾಜಕೀಯ ಪಕ್ಷಗಳು ಕನ್ನಡಿಗರು ಮತ್ತು ನೇಕಾರರು, ಸಾಮಾಜಿಕ ಸಂಘಟನೆಗಳ ಈ ಬೇಡಿಕೆಗೆ ಸ್ಪಂದಿಸದದ್ದರೆ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ದೆ ಎಂದು ಎಚ್ಚರಿಸಲಾಗಿದೆ. ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಆರ್. ಪಿ. ಪಾಟೀಲ, ಅನಂತಕುಮಾರ ಬ್ಯಾಕೂಡ, ಗಣೇಶ ರೋಕಡೆ, ಮಹಾಂತೇಷ ರಣಗಟ್ಟಿಮಠ, ಕಸ್ತೂರಿ ಭಾವಿ, ಮೆಹಬೂಬ ಮಕಾನದಾರ, ಶಿವಾನಂದ ತಂಬಾಕಿ, ಶಿವಪ್ಪ ಶಮರಂತ, ಮೈನೂದ್ದೀನ ಮಕಾನದಾರ, ಬಾಬು ಸಂಗೋಡಿ, ರಾಜು ಕೋಲಾ, ಸಂಜಯ ರಜಪೂತ, ಸಾಗರ ಬೋರಗಲ್, ರಜತ ಅಂಕಲೆ, ಶಂಕರ ಬಾಗೇವಾಡಿ ಹಾಗೂ ಕಾರ್ಯಕರ್ತರು ಭಾಗವಹಿಸಿದರು.