SHARE

ಬೆಳಗಾವಿ: ಒಂದುಕಡೆ ಮಳೆಗಾಲ ಮತ್ತೊಂದೆಡೆ ಕೊರೋನಾ ಭೀತಿ ಮಧ್ಯದಲ್ಲಿ ಗೋಕಾಕ ತಾಲೂಕಿನ ತಪಶಿ ಗ್ರಾಮದಲ್ಲಿ ಹಿಂದುಳಿದ ಮತ್ತು ದಲಿತರು ‘ಗೋಮಾಳದಲ್ಲಿ ಕಟ್ಟಿಕೊಂಡ ಮನೆಗಳನ್ನು ಬೀಳಿಸಲು ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಕಿಡಿಕಾರಿದರು. ಸೋಮವಾರ(ಜು.7) ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಪಶಿ ಗ್ರಾಮದ ಸ.ನಂ.193/1 ಮತ್ತು 2 ರಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದು, ಕಳೆದ ಸುಮಾರು 20-25 ವರ್ಷಗಳಿಂದ ಅಲ್ಲಿಯೇ ವಾಸಿಸುತ್ತಿದ್ದಾರೆ. ಅಕ್ರಮ-ಸಕ್ರಮ ಯೋಜನೆಯಲ್ಲಿ ತಮ್ಮ ವಾಸ ಸ್ಥಳಗಳ ಸಕ್ರಮಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದು, ಗ್ರಾಮದ ಕರವನ್ನೂ ಸಂದಾಯ ಸಹ ಮಾಡುತ್ತಿದ್ದಾರೆ. ಅನೇಕರು ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದ್ದಾರೆ. ಕೆಲವರಿಗೆ ಇದೇ ಜಮೀನಿನಲ್ಲಿ ರಾಜೀವಗಾಂಧಿ ವಸತಿ ನಿಗಮದಿಂದ ಜನತಾ ಮನೆಗಳು ಮಂಜೂರಾಗಿದ್ದು, ಅವರು ಮನೆಗಳನ್ನು ಸಹ ಕಟ್ಟಿಕೊಂಡಿದ್ದಾರೆ. ಆದರೆ, ಈಗ ತಪಶಿ ಗ್ರಾಮಕ್ಕೆ ಅಟಲ ಬಿಹಾರಿ ವಾಜಪೇಯಿ ವಸತಿ ಶಾಲೆ ಮಂಜೂರಾಗಿದ್ದು, ಸದರಿ ಶಾಲೆಯನ್ನು ಸ.ನಂ.193 ರಲ್ಲಿ ಕಟ್ಟಲು ಉದ್ದೇಶಿಸಲಾಗಿದೆ. ಸದರಿ ಶಾಲೆಗೆ ಯಾರದ್ದೂ ವಿರೋಧವಿಲ್ಲ. ನಾವು ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ, ವಸತಿಹೀನ ಹಿಂದುಳಿದ ಮತ್ತು ದಲಿತರು ಕಟ್ಟಿಕೊಂಡ ಮನೆಗಳನ್ನು ಕೆಡವಿ, ಅವರನ್ನು ಬೀದಿಪಾಲು ಮಾಡಿ ಶಾಲೆ ಕಟ್ಟುವದನ್ನು ವಿರೋಧಿಸುತ್ತೇವೆ ಎಂದು ಆಗ್ರಹಿಸಿದರು.

ಜನರ ಹೇಳಿಕೆ: ಸದರಿ ಗೋಮಾಳ ವಿಶಾಲವಾಗಿದ್ದು, ಒಟ್ಟು ಕ್ಷೇತ್ರ ಸುಮಾರು 40 ಎಕರೆಯಿದ್ದು, ಸಾಕಷ್ಟು ಜಾಗ ಖಾಲಿಯಿರುತ್ತದೆ. ಸದರಿ ಖಾಲಿ ಜಾಗೆಯಲ್ಲಿ ಶಾಲೆ ಕಟ್ಟುವದು ಬಿಟ್ಟು ಬಡವರು ವಾಸವಾಗಿರುವ ಜಾಗೆಯಲ್ಲಿಯೇ ಶಾಲೆ ಕಟ್ಟಲು ಹೊರಟಿರುವದು ಸೋಜಿಗವಾಗಿದೆ! ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಪಶಿ ಗ್ರಾಮದಲ್ಲಿ ಹೆಚ್ಚು ಮತ ಬಂದಿರುವದೇ ಸದರಿ ಬೆಳವಣಿಗೆಗೆ ಕಾರಣವೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.

ಸ್ಪಂದಿಸದೇ ಹೋದಲ್ಲಿ ಉಗ್ರ ಪ್ರತಿಭಟನೆ: ಜು. 3 ರಂದು ಶಾಲಾ ಕಟ್ಟಡ ಗುತ್ತಿಗೆದಾರನು ಜೆ.ಸಿ.ಬಿ. ತಂದು ಕಾಮಗಾರಿ ಪ್ರಾರಂಭಿಸಿದ್ದನು. ಸ್ಥಳೀಯರು ಪ್ರತಿಭಟನೆ ಪ್ರಾರಂಭಿಸಿದುದರಿಂದ ಪೋಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ
ಕಾಮಗಾರಿಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಗೋಕಾಕ ತಹಶೀಲ್ದಾರರು ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದು, ಅದೇ ಗೋಮಾಳದಲ್ಲಿ ಖಾಲಿಯಿರುವ ಜಾಗೆಗೆ ಶಾಲಾ ಕಟ್ಟಡವನ್ನು ಸ್ಥಳಾಂತರಿಸುವಂತೆ ಮತ್ತು ಗೋಮಾಳದಲ್ಲಿ ವಾಸಿಸುತ್ತಿರುವ ಜನರಿಗೆ ಖಾಯಂ ಹಕ್ಕು ಪತ್ರ ನೀಡುವಂತೆ ವಿನಂತಿಸಿಕೊಳ್ಳಲಾಗಿದೆ. ಸರಕಾರವು ನಮ್ಮ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕೆಂದು ಗೋಷ್ಠಿಯ ಮೂಲಕ ಆಗ್ರಹಿಸುತ್ತೇವೆ. ಸರಕಾರವು ನಮ್ಮ ಮನವಿಗೆ ಸ್ಪಂದಿಸದೇ ಹೋದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದರು.

ಶಾಸಕರ ಕೈವಾಡ: ಅರಭಾವಿ ಮತಕ್ಷೇತ್ರದ ಶಾಸಕರ ಕೈವಾಡ ಇದರ ಹಿಂದಿರುವುದು ಸ್ಪಷ್ಟಗೊಳ್ಳುತ್ತದೆ, ಈ ಜಾಗದಲ್ಲಿ ಮನೆಗಳಿದ್ದು ಜನ ವಾಸಿಸುತ್ತಿದ್ದರೂ ತಹಶೀಲ್ದಾರ ಮಾತ್ರ ಖಾಲಿ ಜಾಗವಿದೆ ಎಂದು ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ತಪಶಿ ಗ್ರಾಮದಿಂದ ಕಾಂಗ್ರೆಸಗೆ ಹೆಚ್ಚು ಮತ ಬಿದ್ದಿರುವುದು ರಾಜಕೀಯ ವೈಷಮ್ಯದ ಈ ಘಟನಾವಳಿಗಳು ಕಾರಣ ಎಂದು ಆಪಾದಿಸಿದರು. ಇನ್ನೂ ಮಳೆಗಾಲದಲ್ಲಿ ಯಾವುದೇ ತೆರವು ಕಾರ್ಯಾಚರಣೆ ಮಾಡಲು ಕಾನೂನಾತ್ಮಕ ಅವಕಾಶವೇ ಇಲ್ಲ ಅರವಿಂದ ದಳವಾಯಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ಲಗಮನ್ನ ಕಳಸಣ್ಣವರ, ಗುರಪ್ಪ ಹಿಟ್ಟನಗಿ, ಉಳವೇಶ ಪಾಟೀಲ, ಪುಂಡಲೀಕ ಲಡ್ಡಿ ಇತರರು ಉಪಸ್ಥಿತರಿದ್ದರು.