SHARE

ಬೆಳಗಾವಿ: ಮಣಗುತ್ತಿಯಲ್ಲಿ ಶಿವಾಜಿ ಮೂರ್ತಿಗೆ ಅಪಮಾನ ಆಗಿಲ್ಲ, ಇದರಲ್ಲಿ ಕಾಣದ ಕೈಗಳ ಕೈವಾಡವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಅವರು ಸೋಮವಾರ ಸ್ಪಷ್ಟನೆ ನೀಡಿದ್ದಾರೆ. ಮಣಗುತ್ತಿ ಶಿವಾಜಿ ಮೂರ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮೂರ್ತಿ ಪ್ರತಿಷ್ಠಾಪನೆ ವಿಚಾರವನ್ನು ಗ್ರಾಮಸ್ಥರು ಬಗೆ ಹರಿಸಿಕೊಳ್ಳುತ್ತಾರೆ ಎಂದರು. ಇನ್ನು ಅದೊಂದು ಆ ಗ್ರಾಮದ ಸಮಸ್ಯೆ, ಅಲ್ಲಿ ಮೂರ್ತಿ ಸಮಸ್ಯೆ ಅಲ್ಲ ಸ್ಥಳದ ಸಮಸ್ಯೆ ಇದೆ. ಅದನ್ನು ಆ ಗ್ರಾಮದ ಮುಂಖಡರೆ ಈ ಬಗೆ ಪರಿಹರಿಸಿಕೊಳ್ಳುತ್ತಾರೆ. ಅಲ್ಲಿ ಹೊರಗಿನವರಿಗೆ ಅವಕಾಶವಿಲ್ಲ ಎಂದು ಶಿವಸೇನೆ ಮುಂಖಡರಿಗೆ ಸತೀಶ್​ ಜಾರಕಿಹೊಳಿ ಅವರು ತಿರುಗೇಟು ನೀಡಿದ್ದಾರೆ.

ಮತ್ತೆ ಕರ್ನಾಟಕದಲ್ಲಿ ಪ್ರವಾಹ ಭೀತಿ ವಿಚಾರದ ಕುರಿತು ಮಾತನಾಡಿದ ಅವರು, ಪ್ರಧಾನಿ ಮೋದಿಯವರಿಗೆ ಯಡಿಯೂರಪ್ಪನವರ ಮೇಲೆ ಪ್ರೀತಿ ಇಲ್ಲ. ನಾವು ಬರೀ ಮೋದಿಯವರ ಭಾಷಣ ಕೇಳಬೇಕು ಹೊರತು ಅವರು ಕರ್ನಾಟಕಕ್ಕೆ ಸೂಕ್ತ ಪರಿಹಾರ ಕೊಡಲ್ಲ. ಈ ಹಿಂದೆಯೂ ಸಾಕಷ್ಟು ಹಾನಿಯಾದರು ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಬಂದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸತೀಶ್​ ಜಾರಕಿಹೊಳಿ ಅವರು ಅಸಮಾಧಾನ ಹೊರಹಾಕಿದರು.