SHARE

ಬೆಳಗಾವಿ: ವನ್ಯಪ್ರಾಣಿಗಳ ರಕ್ಷಣೆ, ಪೋಷಣೆ ಹಾಗೂ ಅವುಗಳ ಆವಾಸ ಸ್ಥಾನಗಳನ್ನು ಮಾನವ ಚಲನವಲನ ಮುಕ್ತ ಮಾಡಲು ಹೆಚ್ಚಿನ ಪರಿಶ್ರಮ ಪಡುವಂತೆ ಡಿಸಿಎಫ್ ಅಶೋಕ ಪಾಟೀಲ ಸೂಚಿಸಿದ್ದಾರೆ. ವಿಶ್ವ ಆನೆ ದಿನದ ಅಂಗವಾಗಿ ಇಂದು ಸಸಿ ನೆಟ್ಟಿ ಅರಣ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆನೆಗಳ ಸಹಜ ಜೀವನಕ್ಕೆ ಪೂರಕ ವಾತಾವರಣ ಸೃಷ್ಟಿಸುವುದು ಮಾನವರೆಲ್ಲರ ಜವಾಬ್ದಾರಿ ಆಗಿದೆ ಎಂದರು.

ವನ್ಯಜೀವಿಗಳ ಕಳ್ಳಬೇಟೆ ತಡೆಗಟ್ಟಲು ಅರಣ್ಯ ವಿಭಾಗದಲ್ಲಿ 28 ಕಳ್ಳಬೇಟೆ ತಡೆ ಸ್ಟೇಶನ್ಸ್ ಸ್ಥಾಪಿಸಲಾಗಿದೆ, 24*7 ಗಸ್ತು ಮಾಡಲಾಗಿದೆ, ರೈಲ್ವೇ ಇಲಾಖೆಯೊಂದಿಗೆ ಚರ್ಚಿಸಿ ಅರಣ್ಯ ಪ್ರದೇಶದಲ್ಲಿ ರೈಲ್ವೆ ವೇಗ ಕಡಿಮೆ ಮಾಡಲು ಮನವಿ ಮಾಡಲಾಗಿದೆ, ರೈಲ್ವೆ ಡಬಲ್ ಲೈನ್ ಮತ್ತು ಬೆಳಗಾವಿ ಗೋವಾ ರಾಷ್ಟ್ರೀಯ 4A ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ ಪ್ರಾಣಿಗಳಿಗಾಗಿಯೇ ಕಡ್ಡಾಯ ಅಂಡರ್ ಪಾಸ್ ನಿರ್ಮಾಣಕ್ಕೆ ಆ ಇಲಾಖೆಗಳಿಗೆ ಸೂಚಿಸಲಾಗಿದೆ, ರೈಲ್ವೇ ಹಳಿ ಸುತ್ತ ಪ್ರಾಣಿ ಚಲನವಲನ ಪ್ರದೇಶದಲ್ಲಿ ತಡೆ ನಿರ್ಮಿಸಲು ಸೂಚಿಸಲಾಗಿದೆ ಜೊತೆಗೆ ಅರಣ್ಯದಂಚಿನ ವಾಸಿಗಳಿಗೆ ಆನೆಯ ಸಹಜ ಸ್ವಭಾವ ಮತ್ತು ಅದರೊಂದಿಗೆ ನಡೆದುಕೊಳ್ಳಬೇಕಾದ ನಡವಳಿಕೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದರು. ವನ್ಯಪ್ರಾಣಿಗಳಿಂದ ರೈತರ ಬೆಳೆ ನಷ್ಟ ಆದಲ್ಲಿ ತತಕ್ಷಣ ಸಮೀಕ್ಷೆ ನಡೆಸಿ ಪರಿಹಾರ ಕ್ರಮಕ್ಕೆ ಅಧೀನ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು ಇಲ್ಲಿವರೆಗೆ 368 ವನ್ಯಜೀವಿಗಳಿಂದ ಬೆಳೆ ಹಾನಿ ಪ್ರಕರಣಗಳು ದಾಖಲಾಗಿದ್ದು, ಬೆಳಗಾವಿ ಅರಣ್ಯ ವಿಭಾಗ ₹20ಲಕ್ಷ ಪರಿಹಾರ ನೀಡಿದೆ ಎಂದು ಡಿಸಿಎಫ್ ಅಶೋಕ ಪಾಟೀಲ ಆನೆದಿನದ ನಿಮಿತ್ತ ಇಂದು ಮಾಹಿತಿ ನೀಡಿದರು. ಎಸಿಎಫ್ ಎಂ. ಬಿ. ಕುಸನಾಳ, ಆರ್ ಎಫ್ ಓ ಆರ್. ಎಚ್. ಡೊಂಬರಗಿ, ಡಿಆರ್ ಎಫ್ ಓ ವಿನಯ ಗೌಡರ, ರಮೇಶ ಗಿರಿಯಪ್ಪನವರ ಇತರರು ಉಪಸ್ಥಿತರಿದ್ದರು.