SHARE

ಬೆಂಗಳೂರು: ನ್ಯೂಸ್ ಫಸ್ಟ್ ಸುದ್ದಿವಾಹಿನಿಯ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿ ಎಮ್​.ಎನ್​.ಅನುಚೇತ್ ರವರಿಗೆ ದೂರು ನೀಡಲಾಗಿದೆ. ಈ ಕುರಿತು ಸುದ್ದಿಪ್ರಕಟಿಸಿರುವ ನ್ಯೂಸ್‌ ಫಸ್ಟ್‌ ಸುದ್ದಿವಾಹಿನಿ ಆಡಳಿತ ಮಂಡಳಿ ಈ ಕೆಳಗಿನಂತೆ ಪ್ರಕಟಿಸಿದೆ.

ನಿಮಗೆಲ್ಲರಿಗೂ ಗೊತ್ತಿರುವಂತೆ, ನ್ಯೂಸ್​ಫಸ್ಟ್​ ಸುದ್ದಿ ಸಂಸ್ಥೆ ಕಳೆದ ಒಂದು ವರ್ಷದಿಂದ ಡಿಜಿಟಲ್​ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದೆ. ಅತ್ಯಂತ ನಿಖರ ಹಾಗೂ ವಿಶ್ವಾಸಾರ್ಹ ಮಾಹಿತಿಯನ್ನು ನೀಡುವ ಮೂಲಕ ರಾಜ್ಯದ ಓದುಗರ ಮನಗೆದ್ದಿದೆ. ಅಲ್ಲದೇ ಯೂಟ್ಯೂಬ್​ ನಲ್ಲಿ ಅತ್ಯಂತ ಗುಣಮಟ್ಟದ ವೀಡಿಯೋಗಳು ಹಾಗೂ ಭಿನ್ನ ವಿಭಿನ್ನ ಸುದ್ದಿಗಳನ್ನು ನೀಡುವ ಮೂಲಕ ವೀಕ್ಷಕರ ನಂಬಿಕೆಯನ್ನು ಗಳಿಸುವ ಜೊತೆಗೆ ರಾಜ್ಯದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಡಿಜಿಟಲ್​ ಮಾಧ್ಯಮವಾಗಿದೆ. ಇದುವರೆಗೂ ಕೇವಲ ಫೇಸ್​ಬುಕ್, ಯೂಟ್ಯೂಬ್​ ಹಾಗೂ ನಮ್ಮದೇ ಅದ ವೆಬ್​ಸೈಟ್​ ಮೂಲಕ ಸುದ್ದಿಯನ್ನು ನೀಡುತ್ತಿದ್ದ ನಾವು. ಸೆಪ್ಟೆಂಬರ್​ 20 ತಾರೀಖಿನಿಂದ ಹೊಸ ಸುದ್ದಿವಾಹಿನಿಯನ್ನು ಆರಂಭಿಸುತ್ತಿದ್ದು, ಇದು ದಿನದ 24ಗಂಟೆಯೂ ಪ್ರಸಾರವಾಗುವ ಸುದ್ದಿವಾಹಿನಿಯಾಗಿದೆ. ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿರುವ ನಮ್ಮ ಏಳಿಗೆಯನ್ನು ಸಹಿಸದೆ, ಸುದ್ದಿದಿನ ಎಂಬ ಜಾಲತಾಣದಲ್ಲಿ ಅರುಣ್ ಕುಮಾರ್​ ಎಂಬ ಹೆಸರಿನ ವ್ಯಕ್ತಿ ನ್ಯೂಸ್ ಫಸ್ಟ್ ಬಗ್ಗೆ ದುರುದ್ದೇಶಪೂರಿತವಾಗಿ ಇದು ರಾಜಕೀಯ ವ್ಯಕ್ತಿಯೊಬ್ಬರ ಒಡೆತನಕ್ಕೆ ಸೇರಿದ ಸುದ್ದಿಸಂಸ್ಥೆ ಎಂಬ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದಾರೆ. ಅಲ್ಲದೇ ಅದನ್ನು ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್, ಫೇಸ್ ಬುಕ್‌ಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ. ನ್ಯೂಸ್ ಫಸ್ಟ್ ಸಂಸ್ಥೆ ಸ್ವತಂತ್ರ ಸಂಸ್ಥೆಯಾಗಿದ್ದು ಇದು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗೆ ಸೇರಿರುವುದಿಲ್ಲ. ಹೀಗಿದ್ದರೂ ಇದು ರಾಜಕೀಯ ವ್ಯಕ್ತಿಯ ಒಡೆತನಕ್ಕೆ ಸೇರಿದ್ದೆಂದು ಸುಳ್ಳು ಸುದ್ದಿ ಪ್ರಕಟಿಸಿ ನ್ಯೂಸ್ ಫಸ್ಟ್ ನ ವಿಶ್ವಾಸಾರ್ಹತೆಗೆ ಧಕ್ಕೆ ತಂದು, ಸುದ್ದಿವಾಹಿನಿಯ ಜನಪ್ರಿಯತೆಗೆ, ಆರ್ಥಿಕ ಪ್ರಗತಿಗೆ ಧಕ್ಕೆ ಉಂಟು ಮಾಡುವ ಸ್ಪಷ್ಟ ದುರುದ್ದೇಶ ಮೇಲ್ನೋಟಕ್ಕೇ ಕಂಡುಬರುತ್ತಿದೆ. ಅಲ್ಲದೇ ನಮ್ಮ ಸಂಸ್ಥೆಯ ಮುಖ್ಯಸ್ಥರುಗಳ ಮೇಲೆ ಸುಳ್ಳಿನ ಸರಮಾಲೆ ಹೆಣೆದು ಮಾನಹಾನಿಕರ ಲೇಖನ ಪ್ರಕಟಿಸಲಾಗಿದೆ.

ಹೀಗಾಗಿ ಈ ಲೇಖನದ ಹಿಂದೆ ಒಳಸಂಚು, ಸಂಸ್ಥೆಯ ಜನಪ್ರಿಯತೆ ತಡೆಗಟ್ಟುವ, ಆರ್ಥಿಕ‌ ನಷ್ಟವುಂಟುಮಾಡುವ, ನಿಂದನೆ, ಚಾರಿತ್ರ್ಯವಧೆ ಮಾಡುವ, ಬೆದರಿಸುವ ಸ್ಪಷ್ಟ ದುರುದ್ದೇಶವಿದೆ. ಹಾಗಾಗಿ ನಾವೂ ಈ ರೀತಿ ಮಾನಹಾನಿ ಹಾಗೂ ದುರುದ್ದೇಶಪೂರಿತ ವರದಿ ಪ್ರಕಟಿಸಿರುವ ಸುದ್ದಿದಿನ ವೆಬ್​ಪೋರ್ಟಲ್​ನ ವರದಿಗಾರ ಹಾಗೂ ಅದನ್ನ ಪ್ರಕಟಿಸಿದವರ ವಿರುದ್ಧ ಐಟಿ ಮತ್ತು ಐಪಿಸಿ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿ ಎಮ್​.ಎನ್​.ಅನುಚೇತ್ ರವರಿಗೆ ದೂರನ್ನು ನೀಡಿರುತ್ತೇವೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ನ್ಯೂಸ್ ಫಸ್ಟ್​ ಆಡಳಿತ ಮಂಡಳಿಯವರಾದ ನಾವೂ ಈ ಮೂಲಕ ನಮ್ಮ ಓದುಗರು/ವೀಕ್ಷಕರಿಗೆ ತಿಳಿಸುವುದೇನಂದರೆ, ಇದು ಯಾವುದೇ ರಾಜಕೀಯ ಒಡೆತನಕ್ಕೆ ಸೇರಿದ ಸಂಸ್ಥೆಯಲ್ಲ. ಓದುಗರು ನಮ್ಮ ಸಂಸ್ಥೆಯ ವಿರುದ್ಧ ಪ್ರಕಟವಾಗಿರುವ ಸುಳ್ಳು ಸುದ್ದಿಯನ್ನು ನಂಬಬಾರದು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ ಎಂದು ನ್ಯೂಸ್​ಫಸ್ಟ್​ ಆಡಳಿತ ಮಂಡಳಿ www.thebelgaumnews.com ಗೆ ಮಾಹಿತಿ ನೀಡಿದೆ.