SHARE

ಬೆಳಗಾವಿ: ನಿನ್ನೆಯಷ್ಟೇ (ಗುರುವಾರ) ಪಿರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಆದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಇಂದು ಮದ್ಯರಾತ್ರಿಯೇ ಪೀರನವಾಡಿ ಗ್ರಾಮದಲ್ಲಿ ತಾವು ಗುರುತಿಸಿದ ಸ್ಥಳದಲ್ಲೇ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಕ್ರಾಂತಿಯ ಕಹಳೆ ಊದಿದ್ದಾರೆ.

ಪಿರನವಾಡಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಸ್ಥಾಪಿಸಬೇಕೆನ್ನುವ ಹೋರಾಟ ಹಲವು ವರ್ಷದಿಂದ ಇತ್ತು. ಕಳೆದ ಕೆಲವು ದಿನಗಳಿಂದ ಈ ಕುರಿತು ತೀವ್ರ ಹೋರಾಟವೂ ನಡೆದಿತ್ತು. ಈ ವಿವಾದ ರಾಜ್ಯಮಟ್ಟದಲ್ಲೂ ಗಮನ ಸೆಳೆದಿತ್ತು. ಗುರುವಾರ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಪಿರನವಾಡಿಗೆ ನುಗ್ಗಲು ಯತ್ನಿಸಿದ್ದರು. ಪೊಲೀಸರು ಅವರನ್ನು ತಡೆದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸ್ಥಳಕ್ಕೆ ಆಗಮಿಸಿ, ಇದೇ 29ರಂದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿವಾದ ಬಗೆಹರಿಸುವುದಾಗಿ ತಿಳಿಸಿದ್ದರು.

ಈ ಮಧ್ಯೆ ಶುಕ್ರವಾರ ಬೆಳಗಿನ ಜಾವವೇ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ರಾಯಣ್ಣ ಅಭಿಮಾನಿಗಳು ಪ್ರತಿಷ್ಠಾಪಿಸಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಬೆಳಗ್ಗೆ ಶಿವಾಜಿ ಅಭಿಮಾನಿಗಳೂ ಆಗಮಿಸಿ ಶಿವಾಜಿ ಪುತ್ಥಳಿ ಸ್ಥಾಪನೆಗೆ ಅವಕಾಶ ನೀಡಬೇಕೆಂದು ಪ್ರತಿಭಟನೆ ನಡೆಸಿದರು.