SHARE

ಬೆಳಗಾವಿ:ಇತ್ತೀಚೆಗೆ ನಿಧನರಾದ ಕೇಂದ್ರ ರೈಲ್ವೇ ಸಚಿವ ದಿ.ಸುರೇಶ ಅಂಗಡಿ ಅವರ ವಿಶ್ವೇಶ್ವರಯ್ಯ ನಗರದ ನಿವಾಸಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬೆಳಿಗ್ಗೆ 10:15ರ ಸುಮಾರಿಗೆ ವಿಶೇಷ ವಿಮಾನದಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಆಗಮಿಸಿದ‌ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಿ.ಸಚಿವ ಸುರೇಶ ಅಂಗಡಿ ತಾಯಿ ಸೋಮವ್ವ ಅಂಗಡಿ, ಅವರ ಪತ್ನಿ ಮಂಗಲಾ ಅಂಗಡಿ, ಪುತ್ರಿಯರಾದ ಶ್ರದ್ಧಾ-ಸ್ಫೂರ್ತಿ ಹಾಗೂ ಬಂಧಿಕರಿಗೆ ಸಾಂತ್ವನದ ಮಾತಿನ ಮೂಲಕ ಸಂತೈಸಿದರು. ಸಚಿವರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್. ಕೆ. ಅತೀಕ, ಶಾಸಕರಾದ ಅನಿಲ ಬೆನಕೆ, ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ, ಐಜಿಪಿ ರಾಘವೇಂದ್ರ ಸುಹಾಸ, ಕಮಿಷ್ನರ್ ಕೆ. ತ್ಯಾಗರಾಜನ್, ಎಸ್ಪಿ ಲಕ್ಮಣ ನಿಂಬರಗಿ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ದೆಹಲಿಯಲ್ಲಿ ದಿ. ಸುರೇಶ ಅಂಗಡಿ ಸ್ಮಾರಕ ಅಭಿವೃದ್ಧಿ, ಬೆಳಗಾವಿಯಲ್ಲಿ ಸ್ಮಾರಕ:ಬಿಎಸ್ವೈಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿ ಸುರೇಶ ಅಂಗಡಿ ಆಗಿದ್ದರು. ಒಂದೇ ವರ್ಷದಲ್ಲಿ ರಾಜ್ಯಕ್ಕೆ ಬೇಕಾದ ಎಲ್ಲ ರೈಲ್ವೇ ಕೆಲಸಗಳನ್ನು ನಮಗೆಲ್ಲ ತೃಪ್ತಿದಾಯಕವಾಗಿ ಮಾಡುತ್ತಿದ್ದರು. ಜಾಫರ್ ಷರೀಪ್ ನಂತರ ಅವರಿಗಿಂತ ಹೆಚ್ಚಿನ ಚಟುವಟಿಕೆಯ ರೈಲ್ವೇ ಮಂತ್ರಿಯಾಗಿದ್ದವರು ಸುರೇಶ ಅಂಗಡಿ.
ದೆಹಲಿಯಲ್ಲಿನ ಸುರೇಶ ಅಂಗಡಿ ಅವರ ಸಮಾಧಿ ನಿರ್ಮಾಣ ಹಾಗೂ ಅಭಿವೃದ್ಧಿಗೆ ರಾಜ್ಯ ಸರಕಾರ ಚಿಂತಿಸಿದೆ. ಬೆಳಗಾವಿಯಲ್ಲಿಯೂ ಸಹ ಸುರೇಶ ಅಂಗಡಿ ಅವರ ಸ್ಮಾರಕ ನಿರ್ಮಿಸಲು ಯೋಚಿಸಲಾಗಿದೆ ಎಂದರು.