SHARE

By:ಜಿ. ಪುರುಷೋತ್ತಮ
ಬೆಳಗಾವಿ: ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಲೋಕಸಭಾ ಸ್ಥಾನಕ್ಕೆ ಭಾರತ ಚುನಾವಣಾ ಆಯೋಗ ಉಪಚುನಾವಣಾ ದಿನಾಂಕ ಇನ್ನಷ್ಟೇ ನಿಗದಿಪಡಿಸಲಿದ್ದು, ಈ ಮಧ್ಯೆ ಆಕಾಂಕ್ಷಿಗಳ ನೂಕುನುಗ್ಗಲು ಏರ್ಪಟ್ಟಿದೆ. ಉಪಚುನಾವಣೆಗೆ ಈಗಾಗಲೇ ರಾಜಕೀಯ ಚಟುವಟಿಕೆಗಳು ಜಿಲ್ಲೆಯಲ್ಲಿ ಗರಿಗೆದರಿದ್ದು, ಕಳೆದ ವರ್ಷಗಳ ರಾಜಕೀಯ ಲೆಕ್ಕಚಾರಗಳಡಿ ಕಾಂಗ್ರೆಸ್- ಜೆಡಿಎಸ್ ಗಿಂತ ಬಿಜೆಪಿಯಲ್ಲೇ ಪ್ರಬಲ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರು ಪಕ್ಷದ ಬೇರುಮಟ್ಟದ ಕಾರ್ಯಕರ್ತರು ಪದಾಧಿಕಾರಿಗಳ ಮಟ್ಟದಲ್ಲಿ ಚರ್ಚೆ ಅಭಿಪ್ರಾಯ ಸಂಗ್ರಹ ಮಾಡಿದ್ದು, ECI ಚುನಾವಣಾ ಘೋಷಣೆ ಮಾಡಿದ ನಂತರವೇ ಅಭ್ಯರ್ಥಿಯ ಹೆಸರು ಘೋಷಣೆ ಮಾಡುವುದಾಗಿ ಕಟೀಲ ಮಾಧ್ಯಮಗಳ ಎದುರು ಸ್ಪಷ್ಟಪಡಿಸಿದ್ದಾರೆ.

ಸುರೇಶ ಅಂಗಡಿ ಅವರ ನಿಧನದ ನಂತರ ಕಟೀಲ ಎರಡು ಬಾರಿ ಬೆಳಗಾವಿಗೆ ಆಗಮಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈಗಾಗಲೇ ವಾರದ ಹಿಂದೆ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಗಮನ ಸೆಳೆದಿದ್ದಾರೆ. ದಿ.ಸುರೇಶ ಅಂಗಡಿ ಅಭಿಮಾನಿಗಳು ಮಾತ್ರ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಇಲ್ಲವೇ ಪುತ್ರಿಗೆ ಟಿಕೇಟ್ ಕೊಡುವಂತೆ ಆಗ್ರಹಿಸಿದ್ದಾರೆ. ದಿ.ಸುರೇಶ ಅಂಗಡಿ ಅವರ ಮಾವ ಲಿಂಗರಾಜ ಪಾಟೀಲರು ಗೌರವ ಸ್ಮರಣಾರ್ಥ ಮತ್ತು ಅನುಕಂಪದಾಚೆ ದಿ. ಸುರೇಶ ಅಂಗಡಿ ಅವರ ಕುಟುಂಬಕ್ಕೇ ಟಿಕೇಟ್ ನೀಡುವಂತೆ ನಳೀನಕುಮಾರ ಕಟೀಲ ಅವರಿಗೆ ಆಗ್ರಹಿಸಿದ್ದಾರೆ. ಬಿಜೆಪಿ ಪಕ್ಷದ ಕೆಲವರ ಪ್ರಕಾರ ಲಿಂಗಾಯತ ಬಣಜಿಗ ಅಭ್ಯರ್ಥಿಯೊಬ್ಬನಿಗೆ ದಿ.ಸುರೇಶ ಅಂಗಡಿ ಅವರ ಸ್ಥಾನ ತುಂಬಲು ಅವಕಾಶ ಸಿಗಬೇಕು ಜೊತೆಗೆ ಸಾಧ್ಯವಾದರೆ ಮಂತ್ರಿ ಪದವಿಯನ್ನೂ ಕೊಡಬೇಕು ಎಂದು ಆಗ್ರಹಿಸಿದೆ.

ಖಾಸಗಿ ಸಂಸ್ಥೆಯ ಆಡಳಿತ ಮಂಡಳಿ ಚೇರಮನ್ ಪ್ರಭಾಕರ ಕೋರೆ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರನ್ನು ಭೇಟಿಯಾಗಿದ್ದು, ಮಾಧ್ಯಮಗಳ ಪ್ರಶ್ನೆಗೆ ನಾನಿನ್ನೂ ‘ರಾಜಕೀಯ ನಿವೃತ್ತಿ’ ಆಗಿಲ್ಲ ಎಂದಿದ್ದಾರೆ. ದಶಕಗಳ ಕಾಂಗ್ರೆಸ್ ಸಖ್ಯ ತೊರೆದು 2008ರಲ್ಲಿ ಬಿಜೆಪಿ ಸೇರಿದ್ದ ಖಾಸಗಿ ಸಂಸ್ಥೆ ಚೇರಮನ್ ಪ್ರಭಾಕರ ಕೋರೆ ಅವರಿಗೆ ಅವರ ರಾಜ್ಯಸಭಾ ಸದಸ್ಯ ಅವಧಿ ಮುಗಿದ ನಂತರ ಮತ್ತೊಂದು ಅವಧಿ ಮುಂದುವರೆಸಲು ಬಿಜೆಪಿ ಪಕ್ಷ ಅನುವು ಮಾಡಿಲ್ಲ, ಬದಲಾಗಿ ಸಂಘ ಪರಿವಾರದ ಆಪ್ತ ಈರಣ್ಣ ಕಡಾಡಿಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡಿದ್ದು ಒಂದು ಹೊಸ ಅರ್ಥವನ್ನೇ ನೀಡಿತ್ತು. ದಿ. ಸುರೇಶ ಅಂಗಡಿ ಅವರ ಕುಟುಂಬಕ್ಕೆ ಉಪಚುನಾವಣೆ ಟಿಕೇಟ್ ಸಿಗದಿದ್ದರೆ ಪಂಚಮಸಾಲಿ ಸಮುದಾಯದ ಅಭ್ಯರ್ಥಿಗೆ ಟಿಕೇಟ್ ಕೊಡಬೇಕು ಎಂದು ಕೂಡಲಸಂಗಮ ಶ್ರೀ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಸ್ವಾಮೀಜಿಯ ಈ ಆಗ್ರಹ ಪ್ರಸ್ತುತ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ, ಮಾಜಿ ಶಾಸಕ ವಿ. ಐ. ಪಾಟೀಲ, ಡಾ. ರವಿ ಪಾಟೀಲ, ರಾಜು ಚಿಕ್ಕನಗೌಡರ ಇಲ್ಲವೇ ಮಹಾಂತೇಷ ದೊಡ್ಡಗೌಡರ ಅವರಿಗೆ ಅನುಕೂಲವಾಗಲಿದೆ ಎಂದು ಪಕ್ಷದ ಕಾರ್ಯಕರ್ತರ ಅಂಗಳದ ಪಿಸುಮಾತು.

ಈ ಮಧ್ಯೆ ಸಚಿವ ರಮೇಶ ಜಾರಕಿಹೊಳಿ ತಮ್ಮ ಪುತ್ರ ಅಮರನಾಥ ಜಾರಕಿಹೊಳಿ ಅವರನ್ನು ಲೋಕಸಭೆ ಕಣಕ್ಕೆ ಇಳಿಸುವ ಇಂಗಿತ ಕೆಲ ಆಪ್ತ ನಾಯಕರ ಎದುರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ರಮೇಶ ಜಾರಕಿಹೊಳಿ ಪುತ್ರನಿಗೆ ಟಿಕೇಟ್ ದೊರೆತರೆ ಗೆಲ್ಲಿಸಲು ಶತಾಯ ಗಥಾಯ ‘ಜಾರಕಿಹೊಳಿ ಬ್ರದರ್ಸ್’ ಪಕ್ಷಬೇದ-ವೈಮನಸ್ಸು ಮರೆತು ಒಂದಾಗುತ್ತಾರೆ ಎಂಬುವುದು ಸಾರ್ವಜನಿಕ ಚರ್ಚೆಯ ಭಾಗ. ಈ ಮಧ್ಯೆ ಹಿಂದುಳಿದ ವರ್ಗದ ಮುಂಚೂಣಿ ಕುರುಬ ಜನಾಂಗಕ್ಕೆ ಟಿಕೇಟ್ ಕೊಟ್ಟರೆ ಹೇಗೆ ಎಂಬ ವಿಚಾರದಲ್ಲಿ ಅಧ್ಯಕ್ಷ ನಳೀನಕುಮಾರ ಕಟೀಲ ಮಾಜಿ ಸಂಸದ ಅಮರಸಿಂಹ ಪಾಟೀಲ ಸಲಹೆ ಆಕರಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ವೋಟ್ ಬ್ಯಾಂಕ್ ಉತ್ತರ ಕರ್ನಾಟಕದಲ್ಲಿ ಬಲಪಡಿಸಲು ಕುರುಬರನ್ನು ಟಿಕೇಟಗೆ ಆಯ್ಕೆ ಮಾಡಿದರೆ ಆಶ್ಚರ್ಯವಿಲ್ಲ!

ಕಾಂಗ್ರೆಸ್ ವಲಯದಲ್ಲಿ ಮೀಸೆಮಾವ ಪ್ರಕಾಶ ಹುಕ್ಕೇರಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೆಸರು ಕೇಳಿಬಂದಿದೆ. ಸತೀಶ ಜಾರಕಿಹೊಳಿ ಇಲ್ಲವೇ ಮಹಾಂತೇಷ ಕೌಜಲಗಿ ಅವರಿಗೂ ಟಿಕೇಟ್ ಆಹ್ವಾನ ಬರಬಹುದು ಎಂಬುವುದು ರಾಜಕೀಯ ಪ್ರಾಜ್ಞರ ಪೂರ್ವಲೆಕ್ಕಾಚಾರ. ಜೆಡಿಎಸ್ ಪಕ್ಷ ಬೆಳಗಾವಿ ಲೋಕಸಭೆ ಉಪಚುನಾವಣೆ ಚಟುವಟಿಕೆಗೆ ಇನ್ನೂ ಯಾವ ವಿಚಾರ ಸಹ ಮಾಡಿಲ್ಲ. ಪಕ್ಷದ ವರಿಷ್ಠರ ಸೂಚನೆ ನಿರೀಕ್ಷಿಸಲಾಗುತ್ತಿದೆ. ಜೆಡಿಎಸ್ ನಲ್ಲಿ ಉತ್ತಮ ಅಭ್ಯರ್ಥಿಗಳಿದ್ದು ಪಕ್ಷ ಅವರ ಹೆಸರು ನೇಮಕ ಮಾಡುತ್ತದೆ ಎಂದು ಮುಖಂಡ ಅಶ್ಪಾಕ್ ಮಡಕಿ ತಿಳಿಸಿದ್ದಾರೆ. ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಟಿಕೇಟಗಾಗಿ ನೂಕುನುಗ್ಗಲು ಉಂಟಾಗಿದ್ದು ಇರುಸು ಮುರುಸಿನ ಗುದ್ದಾಟದ ಹೊಗೆಯೂ ಹೊರಬರುತ್ತಿದೆ. ಜಾತಿಲಾಭಿ, ಪ್ರತಿಷ್ಠೆ, ದುಡ್ಡು- ಕಾಂಚಾನದ ಆಮೀಷಗಳ ನಡುವೆ ಯಾರು ಆಯಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು..!? ಎಂಬುವುದನ್ನು ಕಾದು ನೋಡಬೇಕಿದೆ. ದಿ. ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರೇ ನಮ್ಮ ಮುಂದಿನ ಬೆಳಗಾವಿ ಎಂಪಿ ರೀ… ಎಂದು ಸಚಿವ ರಮೇಶ ಜಾರಕಿಹೊಳಿ ಈ ಮಧ್ಯೆ ಸ್ಪಷ್ಠೋಕ್ತಿ ನೀಡಿದ್ದು, ಟಿಕೇಟ್ ಬಿಗಿ ಉಸಿರಾಟದ ವಾತಾವರಣ ಬಿಜೆಪಿಯಲ್ಲಿ ಬಂದ್ ಆಗಲು ಸದ್ಯಕ್ಕೆ ಅನುವು ಮಾಡಿದೆ.