SHARE

ಶಿರಾ(ತುಮಕೂರು): ಶಿರಾದಲ್ಲಿ ನಡೆಯಲಿರುವ ವಿಧಾನಸಭೆ ಉಪಚುನಾವಣೆಗೆ ಗುರುವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ ನಾಮಪತ್ರ ಸಲ್ಲಿಸಿದರು. ಕೆಪಿಸಿಸಿ ಬಹುತೇಕ ಮುಖಂಡರು ಸೇರಿದಂತೆ ಸಾವಿರಾರು ಜನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಕಾಂಗ್ರೆಸ್ ನಾಯಕಿ, ಕೆಪಿಸಿಸಿ ವಕ್ತಾರರಾಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕೂಡ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಹಾಜರಿದ್ದರು. ಈ ವೇಳೆ ಅಭಿಮಾನಿಗಳು ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ನೋಡಲು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದರು. ಚಿತ್ರತಾರೆಯರ ರೀತಿಯಲ್ಲಿ ಮಹಿಳೆಯರು, ಯುವಕರು ಸೇರಿದಂತೆ ಎಲ್ಲರೂ ಹೆಬ್ಬಾಳಕರ್ ಬಳಿ ಮುನ್ನುಗ್ಗಿ ಬರುತ್ತಿದ್ದರು. ಅನೇಕರು, ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮನಿಗೆ ಜೈ, ಕರ್ನಾಟಕದ ಸೋನಿಯಾ ಗಾಂಧಿಗೆ ಜೈ ಎಂದೆಲ್ಲ ಘೋಷಣೆ ಕೂಗುತ್ತಿದ್ದರು. ಲಕ್ಷ್ಮಿ ಹೆಬ್ಬಾಳಕರ್ ಅವರೇ ಅಭ್ಯರ್ಥಿಯೇನೋ ಎನ್ನುವ ರೀತಿಯಲ್ಲಿ ಘೋಷಣೆಗಳು ಮೊಳಗುತ್ತಿದ್ದವು. ಅಭಿಮಾನಿಗಳನ್ನು ನಿಯಂತ್ರಿಸಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ರಕ್ಷಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಒಟ್ಟಾರೆ, ಅಲ್ಲಿ ಹೋದರೂ ಲಕ್ಷ್ಮಿ ಹೆಬ್ಬಾಳಕರ್ ಹವಾ ಮಾತ್ರ ಕಡಿಮೆ ಇರಲಿಲ್ಲ.