SHARE

ಬೆಳಗಾವಿ: ಇಟ್ಟ ಹೆಜ್ಜೆಯಲ್ಲಿ ಹಿಂದೆ ಸರಿಯದೇ ತಮ್ಮ ಗೆಲುವು ಸಾಬೀತುಪಡಿಸುತ್ತ ಬಂದಿರುವ ಸಚಿವ ರಮೇಶ ಜಾರಕಿಹೊಳಿ ಈಗ ಬೆಳಗಾವಿ ಗ್ರಾಮೀಣ ಕ್ಷೇತ್ರ ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಸಜ್ಜಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಕೈವಶವಾಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರಗೆ ನೇರವಾಗಿ ಇಂದು ಸಚಿವ ರಮೇಶ ಜಾರಕಿಹೊಳಿ ಟಾಂಗ್ ನೀಡಿದ್ದು, ನೇರಾನೇರ ಫೈಟ್ ಶುರುವಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಸಚಿವ ರಮೇಶ ಜಾರಕಿಹೊಳಿ ನಾನೇನು ಯಾರನ್ನೂ ಸೋಲಿಸುವ ಷಡ್ಯಂತ್ರ ಮಾಡಬೇಕಿಲ್ಲ, ಸೋಲಿಸುವುದು-ಗೆಲ್ಲಿಸುವುದು ಪ್ರಜಾಪ್ರಭುತ್ವದಡಿ ನಮ್ಮ ಹಕ್ಕಷ್ಟೇ ಎಂದಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಆತ ಸ್ಪರ್ಧಿಸಿದ ಕ್ಷೇತ್ರದಲ್ಲಿ ಗೆಲ್ಲಿಸುವುದು ನಮ್ಮ ಕರ್ತವ್ಯ. ನಮ್ಮ ಪಕ್ಷದ ಪರ ನಾವು ಕೆಲಸ ಮಾಡೋದರೆ, ನಮ್ಮ ವಿರೋಧಿಗಳು ಷಡ್ಯಂತ್ರ ಎಂದು ನಮಗೆ ಕರೆಯುವುದು ಔಚಿತ್ಯವಲ್ಲ ಎಂದ ಶಾಸಕಿಗೆ ತಿವಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನದು, ಅಲ್ಲಿ ಪ್ರಸ್ತುತ ಯಾರೇ ಗೆದ್ದಿದ್ದರೂ, ಅದು ನನ್ನ ಕ್ಷೇತ್ರವೇ. ಗ್ರಾಮೀಣ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಪಡಿಸುವುದು ನನಗೂ ಗೊತ್ತಿದೆ ಎಂದು ಘೋಷಿಸಿದ್ದಾರೆ. ಇತ್ತೀಚೆಗೆ ಪ್ರಕಟಗೊಂಡ ಗ್ರಾ. ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಪಾರ್ವತಿ ಸ್ಪರ್ಧಿಸಿರುವ ವಿಚಾರ ನನಗೆ ತಿಳಿದಿರಲಿಲ್ಲ, ಅವರ ಸೋಲನ್ನು ನನ್ನ ಸೋಲು ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಬರೆದುಕೊಂಡಿದ್ದಾರೆ ಎಂದು ರಮೇಶ ಜಾರಕಿಹೊಳಿ ಮರು ವ್ಯಂಗ್ಯ ಮಾಡಿದ್ದಾರೆ.