SHARE

ಬೆಳಗಾವಿ: ಬೆಳಗಾವಿ ನಗರದಲ್ಲಿ ಎಂಇಎಸ್ ಬಾಲ ಪೊಲೀಸರು ಕಟ್ ಮಾಡುತ್ತಿದ್ದಂತೆ ಮುಖಭಂಗ ಅನುಭವಿಸಿದ ಮರಾಠಿಗರ ಬೆಂಬಲಕ್ಕೆ ನೆರೆಯ ಮಹಾಹಾರಾಷ್ಟ್ರದ ಶಿವಸೇನೆ ಬೆಂಬಲಕ್ಕೆ ಬಂದಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಸಿನ್ನೋಳಿ ಗಡಿ ಭಾಗದ ಗ್ರಾಮಕ್ಕೆ ಮಹಾರಾಷ್ಟ್ರದ ಶಿವಸೇನಾ ಕೊಲ್ಲಾಪುರದ ಜಿಲ್ಲಾಧ್ಯಕ್ಷ ವಿಜಯ ಧಾವಣೆ ನೇತ್ರತ್ವದಲ್ಲಿ ಬೆಳಗಾವಿ ತಾಲೂಕು ಪ್ರವೇಶಿಸಿ ಬೆಳಗಾವಿ ನಗರಕ್ಕೆ ಒಳ ನುಗ್ಗಲು ಪ್ರಯತ್ನ ಮಾಡುತ್ತಿದ್ದು ಪೊಲೀಸರೊಂದಿಗೆ ತಳ್ಳಾಟ ನುಗ್ಗಾಟದಲ್ಲಿ ತೊಡಗಿದ್ದಾರೆ.

ಬೆಳಗಾವಿ ಮಹಾನಗರಪಾಲಿಕೆ‌ ಮುಂದಿನ ಕನ್ನಡ ಧ್ವಜವನ್ನು ತೆರವು ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಬೆಕೆ ಕೊಡದ ನೂರಾರು ಪೊಲೀಸರು ಶಿವಸೇನಾ ಪುಂಡರನ್ನು ಹೆಡೆಮುರಿ ಕಟ್ಟಿದ್ದು, ಅಗತ್ಯ ಬಿದ್ದರೆ ಲಾಠಿ ಚಾರ್ಜ್ ಮಾಡುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಗಡಿ ಪ್ರದೇಶ ಸಿನ್ನೊಳಿ ಹದ್ದಿಗೆ ಡಿಸಿಪಿ ವಿಕ್ರಂ ಆಮ್ಟೆ ಭೇಟಿ ನೀಡಿದರು. ಈ ಮಧ್ಯೆ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಇಂದು ಮಧ್ಯಾಹ್ನ ತುರ್ತು ನಿಷೇದಾಜ್ಞೆ ಹೊರಡಿಸಿದ್ದು ಮಹಾರಾಷ್ಟ್ರದ ಯಾವುದೇ ನಾಯಕರು, ಯಾವುದೇ ಸಂಘಟನದಗಳ ಬೆಳಗಾವಿ ತಾಲೂಕು ಪ್ರವೇಶಿಸದಂತೆ ಕಟ್ಟಾಜ್ಞೆ ಮಾಡಿದ್ದಾರೆ. ಕೊಲ್ಲಾಪುರ ಶಿವಸೇನಾ ಜಿಲ್ಲಾಧ್ಯಕ್ಷ ವಿಜಯ ಧಾವಣೆ ಸಹಿತ ಯಾರೇ ಬೆಳಗಾವಿ ಪ್ರವೇಶಕ್ಕೆ ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ತ್ಯಾಗರಾಜನ್ ತಿಳಿಸಿದ್ದಾರೆ.