SHARE

ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ಸಮರ್ಥ ಅಭ್ಯರ್ಥಿಗಳ ಹುಡುಕಾಟದ ಬೆನ್ನಲ್ಲೆ ತಾನು ಸಹ ಸ್ಪರ್ಧಿಸುತ್ತಿದ್ದೇನೆ ಎಂದು ಹಿರಿಯ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಇಂಗಿತ ವ್ಯಕ್ತಪಡಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯದ ಸಂಸ್ಕ್ರತಿ ಮತ್ತು ಆಸ್ಮಿತೆ ರಾಜ್ಯದಲ್ಲಿ ಕಾಪಾಡಿ ಸಾಹಿತ್ಯ ಲೋಕದ ಶ್ರೀಮಂತಿಕೆ ಹೆಚ್ಚಿಸಲು ಇಂದು ಸಮರ್ಥ ಅಭ್ಯರ್ಥಿಯ ಆಯ್ಕೆಯ ಬಗ್ಗೆ, ಸಾಹಿತಿಗಳೇ ಸ್ಪರ್ಧಿಗಳಾಗಬೇಕು ಎಂದು ನಡೆದ ಚರ್ಚೆಗಳನ್ನು ಉಲ್ಲೇಖಿಸುತ್ತ ಸಂಗಮೇಶ ತಮ್ಮ ಆಕಾಂಕ್ಷೆ ವ್ಯಕ್ತಪಡಿಸಿದರು. ಮಾಧ್ಯಮಗಳಲ್ಲಿ ಮತ್ತು ಸಾಹಿತ್ಯ ವಲಯದಲ್ಲಿ ನಡೆದ ಚರ್ಚೆಗಳು ನನ್ನನ್ನು ಇಂದು ಮತ್ತೆ ಸ್ಪರ್ಧೆಗೆ ಒಡ್ಡುವಂತೆ ಮಾಡಿದೆ. ರಾಜ್ಯದಲ್ಲಿ 3ಲಕ್ಷ‌ ಮೇಲ್ಪಟ್ಟು ಸಾಹಿತಿಗಳು ಇದ್ದು ಅವರನ್ನೆಲ್ಲ ವ್ಯಕ್ತಿಗತ ಮುಟ್ಟುವುದು ಸಾಧ್ಯವಾಗಲಿಕ್ಕಿಲ್ಲ ಎಂದು ಸಂಗಮೇಶ ಬಾದವಾಡಗಿ ಮಾರ್ಮಿಕವಾಗಿ ನುಡಿದು, ಸಾಹಿತ್ಯಲೋಕದ ಮತದಾರರ ಬೆಂಬಲ ಬಾದವಾಡಗಿ ಯಾಚಿಸಿದರು.

ಸುಮಾರು 16ಕ್ಕೂ ಮೇಲ್ಪಟ್ಟು ಸಾಹಿತ್ಯ ರಚಿಸಿದ ಸಾಕಷ್ಟು ಅನುಭವ ಹೊಂದಿರುವ ನನಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಎರಡು ಅವಧಿಯ ಗೌರವ ಕಾರ್ಯದರ್ಶಿ ಆದ ಅನುಭವ ಇದೆ ಎಂದರು. ಸಾಹಿತ್ಯ ಪರಿಷತ್ತಿನ ಒಳ ಹೊರ ದುಡಿಯದವರು ಎಷ್ಟೋ ಜನ ಇಂದು ಪರಿಷತ್ ಚುನಾವಣೆಗೆ ಮುಂದೆ ಬರುತ್ತಿದ್ದಾರೆ ಎಂದು ಸಂಗಮೇಶ ಬಾದವಾಡಗಿ ಆತಂಕ ವ್ಯಕ್ತಪಡಿಸಿದರು. ಕಳೆದ ಬಾರಿಯ ಚುನಾವಣೆಯಲ್ಲಿ ಆದ ಸೋಲಿನ ಅನುಭವ ಈ ಬಾರಿ ನನಗೆ ಆಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಐದು ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣಗಳು, ಕಮ್ಮಟ ಸಮಾವೇಶಗಳ ಸಂಘಟಕನಾತ್ಮಕ ಸಹ ಕಾರ್ಯದೊಂದಿಗೆ ಭಾಗವಹಿಸಿದ್ದೆನೆ ಎಂದರು. ಎಷ್ಟೊ ಕನ್ನಡ ಸಾಹಿತ್ಯದ ಮೇರು ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದರೂ ಇಂದಿನ ವಿದ್ಯುನ್ಮಾನ ಅಂತರ್ಜಾಲ ಯುಗದಲ್ಲಿ ಕನ್ನಡ ಪುಸ್ತಕಗಳು ಆನಲೈನ್ ಓದಿಗೆ ಲಭ್ಯವಾಗಬೇಕಾಗಿದೆ, ಸಾಹಿತ್ಯ ಪರಿಷತ್ತು ಬೆಂಗಳೂರು ಆಚೆ ರಾಜ್ಯದ ಉದ್ದಗಲಕ್ಕೂ ಹರಡಬೇಕು ಈ ಮೂಲಕ ಪ್ರತಿಭಾನ್ಯಾಯ, ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯದಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟುವ ಬಯಕೆ ನನಗೆ ಇದೆ ಎಂದರು.

ಗಡಿ ವಿಚಾರದಲ್ಲಿ ನ್ಯಾಯ ಪಡೆಯುವುದನ್ನು ಇಂದು ಗಡಿ ಹೋರಾಟಗಾರರಿಗೆ ಮಾತ್ರ ಸೀಮಿತ ಮಾಡದೇ ಇಂದು ನಮ್ಮ ರಾಜ್ಯದ ಕನ್ನಡ ಸಾಹಿತ್ಯಶ್ರೇಷ್ಟರ ದನಿ ಮಹಾರಾಷ್ಟ್ರ ವಿರುದ್ದ ಏಳಬೇಕಾದ ಅನಿವಾರ್ಯತೆ ಇದೆ. ಗಡಿ ಸಮಸ್ಯೆಗಳನ್ನು ಬಗೆಹರಿಸಲು ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ ದುಡಿದು ಸರಕಾರಕ್ಕೆ ವರದಿ ಸಲ್ಲಿಸಿದ ಅನುಭವ ಈಗಾಗಲೇ ಇದೆ ಎಂದರು. ಗಡಿ ಬರೀ ಗೆರೆಯಾಗದೇ ಅದು ಸಾಮರಸ್ಯದ ಪ್ರದೇಶವಾಗಬೇಕು, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದರೆ ಬೆಳಗಾವಿ- ಧಾರವಾಡ ಇಲ್ಲವೇ ಉತ್ತರ ಕರ್ನಾಟಕ ಭಾಗದಲ್ಲಿ ಕಸಾಪ ರಾಜ್ಯ ಕಾರ್ಯಾಲಯ ವಿಸ್ತರಿಸಲಾಗುವುದು ಎಂದರು.
ಎಲ್.ಸಿ. ಮಾವನೂರ, ಕೆ. ಆರ್. ಕಂದಗಲ್, ಬಿ. ಎಸ್.ಸೊಲ್ಲಾಪುರ ಇತರರು ಉಪಸ್ಥಿತರಿದ್ದರು.