SHARE

ಬೆಳಗಾವಿ:ಕೊವಿಡ್ ಮತ್ತೆ ರಾಜ್ಯದಲ್ಲಿ ಸದ್ದು ಮಾಡಿದ್ದು ರಾಜ್ಯ ಸರಕಾರ ಮತ್ತೆ ಅಗತ್ಯ ಕ್ರಮ ವಹಿಸಿದೆ. ಕರೋನಾ ಕೇಸ್ ಹೆಚ್ಚಿರುವ ಕೇರಳ ಮತ್ತು ಮಹಾರಾಷ್ಟ್ರದಿಂದ ಜನ ಆಗಮಿಸದಂತೆ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದ್ದು, ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರ ಗಡಿ ಉದ್ದಕ್ಕೂ ಚೆಕ್ ಪೋಸ್ಟಗಳು ಕಾರ್ಯಪ್ರವೃತ್ತವಾಗಿವೆ. ರಾಷ್ಟ್ರೀಯ ಹೆದ್ದಾರಿ 4ರ ಕುಗನೊಳ್ಳಿ ಚೆಕ್ ಪೋಸ್ಟನಲ್ಲಿ ಮತ್ತೆ ಕೊವಿಡ್ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಸ್ವ ವೈದ್ಯಕೀಯ ವರದಿ ನೆಗೆಟಿವ್ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರ ಗಡಿಯುದ್ದಕ್ಕೂ ಬೆಳಗಾವಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಬೆಳಗಾವಿ ಜಿಲ್ಲಾ ಆರೋಗ್ಯ ಸಿಬ್ಬಂಧಿ ಹಾಗೂ ಪೊಲೀಸರು ಈಗಾಗಲೇ ಕುಗನೊಳ್ಳಿ ಚೆಕ್ ಪೋಸ್ಟನಲ್ಲಿ ಬಿಗಿ ಬಂದೋಬಸ್ತ ಮಾಡಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಿ ದೇವಸ್ಥಾನ ಸೇರಿ ಪ್ರಮುಖ ಧಾರ್ಮಿಕ ಕೇಂದ್ರಗಳು ಮತ್ತು ಪ್ರಮುಖ ಸ್ಥಳಗಳಲ್ಲಿ ನಿಷೇದಾಜ್ಞೆ ಹೊರಡಿಸಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಕೊಲ್ಲಾಪುರ, ಸಾಂಗಲಿ, ಸತಾರ ಸೇರಿ ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈಗಾಗಲೇ ಕಠಿಣ ಲಾಕ್ ಡೌನ್ ಮಾಡಿ ಆದೇಶಿಸಿದ್ದಾರೆ. ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಕಠಿಣ ಲಾಕಡೌನ್ ಜಾರಿಗೆ ಬಂದಿದ್ದು ಕನಿಷ್ಠ ಒಂದು ವಾರ ಜನ ಹೊರಬೀಳದಂತೆ ಆದೇಶ ನೀಡಲಾಗಿದೆ. ಇದರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ಬಸ್ಸುಗಳ ವಿನಿಮಯ ಬಹುತೇಕ ಇಂದು ನಿಂತು ಹೋಗಿದ್ದು, ಮಹಾಮಾರಿ ಕರೋನಾ ಮತ್ತೆ ಎರಗದಂತೆ ಎಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಇಲ್ಲದೇ ಜನ ಓಡಾಡುವಂತಿಲ್ಲ, ನೆಗೆಟಿವ್ ವರದಿ ಇದ್ದರೆ ಮಾತ್ರ ಅಗತ್ಯ ಮುಂಜಾಗೃತಾ ತಿಳಿವಳಿಕೆ ಮೂಲಕ ಕಾರು ಬೈಕಗಳಿಗೆ ಪ್ರವೇಶಾವಕಾಶ ನೀಡಲಾಗುತ್ತಿದೆ.