SHARE

ಬೆಳಗಾವಿ: ರಾಜ್ಯದ ಪ್ರಮುಖ ಜನಜನಿತ ಪೊಲೀಸ್ ಠಾಣೆಗಳಲ್ಲಿ ಒಂದಾದ ಬೆಳಗಾವಿ ನಗರ ಮಾರ್ಕೆಟ್ ಠಾಣೆಗೆ ಈಗ ಐವತ್ತರ ಹರೆಯ. 1970ರ ಫೆ. 14ರಂದು ಮೈಸೂರು ರಾಜ್ಯದ ಮುಖ್ಯಮಂತ್ರಿ ವಿರೇಂದ್ರ ಪಾಟೀಲ ಠಾಣೆಗೆ ಚಾಲನೆ ನೀಡಿದ್ದರು. ಅಂದಿನ ಕಂದಾಯ ಸಚಿವ ಎಚ್. ವಿ. ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ನಗರದಲ್ಲಿ ‘ಮಾರ್ಕೆಟ್ ಪೊಲೀಸ್ ಠಾಣೆ ಕಠಿಣವಾಗಿದ್ದರೆ, ನಗರ ಶಾಂತ ಸರಳ…’ ಎಂಬ ಸುದ್ದಿ ನೀವೆಲ್ಲ ಗಮನಿಸಿರುತ್ತೀರಿ. ಬಹಳ ಆಯಕಟ್ಟಿನ ಪ್ರದೇಶ ವ್ಯಾಪ್ತಿ ಹೊಂದಿರುವ ಮಾರ್ಕೇಟ್ ಪೊಲೀಸ್ ಠಾಣೆ ಅವಾಗವಾಗ ಸುದ್ದಿಯಲ್ಲಿರುತ್ತದೆ.

ಈ ವರ್ಷ ಸುವರ್ಣ ಮಹೋತ್ಸವ ಗಳಿಗೆ ಆಗಮಿಸುವ ಬಗ್ಗೆ ಗಮನ ಇಲ್ಲದಿದ್ದರೂ ‘ ಕಾಲ’ ವೇ ಇಂದು ಮಾರ್ಕೆಟ್ ಠಾಣೆಗೆ ಹೊಸರೂಪ ನೀಡಿದೆ. ಉತ್ತಮ ಕಟ್ಟಡ ಶೈಲಿ ಇದ್ದರೂ, ಐವತ್ತು ವರ್ಷಗಳು ಕಳೆದದ್ದರಿಂದ ಈಗ ಮರು ಸಿಂಗಾರಗೊಂಡಿದೆ. ಪೊಲೀಸ್ ಠಾಣೆಗೆ ಭೌತಿಕ ಸೌಂದರ್ಯ ಮತ್ತು ಕೆಲಸದ ಕಾರ್ಯವೈಖರಿ ಸಶಕ್ತಗೊಳಿಸಲು ಠಾಣಾಧಿಕಾರಿಗಳು, ಹಿರಿಯ ಅಧಿಕಾರಿಗಳು ಮತ್ತು ವಿಶೇಷವಾಗಿ ಠಾಣಾ ಸಿಬ್ಬಂದಿ ವಹಿಸಿದ ಆಸ್ಥೆ ಅಭಿನಂದನಾರ್ಹ. ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಹೃದಯ ದಾನಿಗಳು ಮತ್ತು ಉದ್ಯಮಿಗಳು ಠಾಣೆಯ ಅಭಿವೃದ್ಧಿಗೆ ಕೈಜೋಡಿಸಿದ್ದು ಅದರ ಸುವರ್ಣಮಹೋತ್ಸವಕ್ಕೆ ಕಳೆ ತಂದಿದೆ. ಫೆ. 14ರಂದೇ ಸುವರ್ಣಮಹೋತ್ಸವ ಸರಳ ಸಂಭ್ರಮ ಆಚರಿಸಲು ಸಿದ್ಧವಾಗಿದ್ದ ಠಾಣೆಗೆ ‘ಪುಲ್ವಾಮಾ ಅಟ್ಯಾಕ್ ಕರಾಳ’ ದಿನ ತಡೆ ಹಿಡಿಯಿತು. ಪೊಲೀಸ್ ಠಾಣೆಯನ್ನು ಇಡಿಯಾಗಿ ಸುಣ್ಣಬಣ್ಣ ಮತ್ತು ಮೂಲಸೌಕರ್ಯದಿಂದ ಮಾರ್ಪಡಿಸಿ ನಗರದ ಇತರ ಠಾಣೆಗಳಿಗೆ ಮಾದರಿ ಮಾಡಲಾಗಿದೆ. ಹಿಂದಿನ ಇನ್ಸಪೆಕ್ಟರ್ ವಿಜಯ ಮುರಗುಂಡಿ ಠಾಣೆ ನವೀಕರಣಕ್ಕೆ ಕಟ್ಟಿದ ಕನಸು, ಅವರ ನಂತರ ಬಂದ ಹೊಸ ಇನ್ಸಪೆಕ್ಟರ್ ಸಂಗಮೇಶ ಶಿವಯೋಗಿ ನೆರವೇರಿಸಿ ಗಮನ ಸೆಳೆದಿದ್ದಾರೆ. ಅವರ ದಣಿವರಿಯದ ಕಾರ್ಯ ಹೊಸ ಹೊಸ ಸಾಧನೆಗಳಿಗೆ ನಾಂದಿ ಹಾಡಿದೆ.

ಕಾರ್ಯಬಾಹುಳ್ಯ: ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ನ್ಯಾಯಾಲಯ, ಜಿಲ್ಲಾ ಪಂಚಾಯಿತಿ, ಐಜಿಪಿ ಮತ್ತು ಎಸ್ಪಿ, ಪೊಲೀಸ್ ಮತ್ತು ಪಾಲಿಕೆ ಕಮಿಷ್ನರ್ ಕಚೇರಿಗಳು; ಸರ್ಕ್ಯೂಟ್ ಹೌಸ್, ಕಿಲ್ಲಾ ದುರ್ಗಾ ದೇವಸ್ಥಾನ, ಕೇಂದ್ರ ಹಾಗೂ ಸಿಟಿ ಬಸ್ ನಿಲ್ದಾಣಗಳು, ನಗರದ ಪ್ರಮುಖ ಮಾರುಕಟ್ಟೆ ಪ್ರದೇಶ ಹೊಂದಿರುವ ಠಾಣಾ ವ್ಯಾಪ್ತಿಯಲ್ಲಿ ಭಾಷಾ, ಧಾರ್ಮಿಕ, ಕೋಮುವೈಷಮ್ಯ ಗಲಾಟೆಗಳು, ಸಾಮಾಜಿಕ ಪ್ರತಿಭಟನೆಗಳು, ವಿಐಪಿಗಳ ಸತತ ಚಲನವಲನ ಸೇರಿ ಇತರ ಹತ್ತಾರು ಜವಾಬ್ದಾರಿ ವಹಿಸುವಲ್ಲಿ ಠಾಣೆ ಗಮನ ಸೆಳೆದಿದೆ.

ಠಾಣೆಗೆ ಸಂದ ಐವತ್ತು ವರ್ಷಗಳ ಸವಿಸ್ಮರಣೆಗೆ ಗರಿಯಾಗಿ ಠಾಣೆಯ ಮುಖ್ಯಪೆದೆ ನರಸಪ್ಪ ವೈ. ಮೈಲಾಕೆಗೆ ಸಂದ ಸಿಎಂ ಪದಕ ಹರ್ಷ ಹೆಚ್ಚಿಸಿದೆ. ಒಬ್ಬರು ಇನ್ಸಪೆಕ್ಟರ್ ಮತ್ತು ಇಬ್ಬರು ಪಿಎಸ್ಐ ಸಹಿತ ಸಿಬ್ಬಂಧಿ ಹೊಂದಿರುವ ಠಾಣೆಗೆ ಇನ್ನೂ ಹೆಚ್ಚುವರಿ ಸಿಬ್ಬಂಧಿ ನಿಯೋಜಿಸಿದರೂ ಕಡಿಮೆಯೇ ಎಂಬಷ್ಟು ಕಾರ್ಯ ಒತ್ತಡ ಠಾಣೆ ಹೊಂದಿದೆ. ಪೊಲೀಸ್ ಠಾಣೆಯ ನವೀಕರಣಕ್ಕೆ ಪಿಎಸ್ ಐಗಳಾದ ವಿಠ್ಠಲ ಹಾವನ್ನವರ, ಎ. ಎಸ್. ಮರಾಠೆ, ಎಎಸ್ ಐ ಅಶೋಕ ಯರಗಟ್ಟಿ, ರಾಜು ಹವಾಲ್ದಾರ, ಎಂ. ಕೆ. ಪತ್ತೆ, ಎ. ಎಂ. ಮುಜಾವರ, ಮುಖ್ಯಪೆದೆ ಎನ್. ವೈ. ಮೈಲಾಕೆ, ನಂದಕುಮಾರ ಅಂಚಿ, ಆಶಾ ಕಲ್ಲಪ್ಪನವರ, ಲಕ್ಷ್ಮೀ ಲಕ್ಕನ್ನವರ, ಸುರೇಖಾ ಹೆಗಡೆ, ರೀಟಾ ಲಾಡ್, ಶರತ್ ಖಾನಾಪುರೆ, ವಿಶ್ವನಾಥ ಮಾಳಗಿ, ಆಶೀರ್ ಜಮಾದಾರ, ಲಕ್ಷ್ಮಣ ಕಡೋಲಕರ, ಎಸ್. ಮಲ್ಲಪ್ಪ ತೇಲಿ, ಪರಶುರಾಮ ದನದವರ, ಮಾರುತಿ ಚಾವಡಿ, ರಮೇಶ ಎಮ್ಮಿ, ಉದಯ ಪೂಜಾರಿ, ರವಿ ಕೋಲಕಾರ, ಸಂದೀಪ ಬಾಗಡಿ, ವಿ. ಡಿ. ಬಾಬಾನಗರ ಸೇರಿ ಇತರ ಠಾಣಾ ಸಿಬ್ಬಂಧಿ ಠಾಣಾ ಅಭಿವೃದ್ದಿಗೆ ಶ್ರಮ ಹಾಕಿದ್ದು ಗಮನಾರ್ಹ. ಸ್ವಯಂಪ್ರೇರಣೆಯಿಂದ, ಸಾರ್ವಜನಿಕ ಸಹಾಯ ಪಡೆದರೆ ಯಾವುದೇ ಸರಕಾರಿ ಕಚೇರಿ, ಸ್ವಯಂ ಸೇವಾ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ. ಘಟಕಾಧಿಕಾರಿ ಮನಸ್ಸು ಮಾಡಿದರೆ ಸಿಬ್ಬಂದಿ ಸಾಥ್ ಕೊಡುತ್ತಾರೆ, ಜನ ಕೈಗೂಡಿಸುತ್ತಾರೆ.