SHARE

ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆ ಬಿಜೆಪಿಗೆ ‘ಒನ್ ವೇ’ ಗೆಲುವು ತಂದು ಕೊಡುವ ಬಗ್ಗೆ ಅಪ್ಪಟ ವಿಶ್ವಾಸ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ದಿ. ಸುರೇಶ ಅಂಗಡಿ ಸೌಮ್ಯ-ಸಜ್ಜನ ಹಾಗೂ ಜನಾನುರಾಗಿ ಸುದೀರ್ಘ ರಾಜಕೀಯ ನಡೆಸಿದ್ದಲ್ಲದೇ, ಮಂತ್ರಿಯಾಗಿ ಮಾಡಿದ ಕೆಲಸಗಳು ಜನರ ಮನಸ್ಸಲ್ಲಿ ಅಚ್ಚೊತ್ತಿದ್ದು ಇದು ಅವರ ಧರ್ಮಪತ್ನಿ ಮಂಗಲಾ ಅಂಗಡಿ ಅವರಿಗೆ ನಿರಾಯಾಸ ಗೆಲುವು ತಂದುಕೊಡಲಿದೆ ಎಂಬುವುದು ವಿಶ್ಲೇಷಕರ ಚಿಂತನೆಯ ಭಾಗ.ಸುರೇಶ ಅಂಗಡಿ ಬದುಕಿರುವಾಗ ಲಯಲೇಶವೂ ಸಹ ಅವರ ಕುಟುಂಬ ಸದಸ್ಯರು ರಾಜಕೀಯದಲ್ಲಿ ಮೂಗು ತೂರಿಸದೇ ಜನಸಾಮಾನ್ಯರಂತೆ ಕೌಟುಂಬಿಕ ಜೀವನ ನಡೆಸಿರುವ ಉತ್ತಮ ಹಿನ್ನೆಲೆ ಗಮನಾರ್ಹ. ಅಧಿಕಾರ, ಅಂತಸ್ತಿನ ಅಹಂ ತೋರಿಸದೇ ಜನರ ಮಧ್ಯೆ ಓಡಾಡಿಕೊಂಡಿದ್ದ ದಿ. ಸುರೇಶ ಅಂಗಡಿ ಬೆಳಗಾವಿ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿಗೂ ಚಿರಪರಿಚಿತ. ಸಂಸದರಾಗಿ ಗಮನ ಸೆಳೆಯುವ ಕೆಲಸ ಮಾಡಲಿಲ್ಲ ಎಂಬ ಅಪವಾದವನ್ನು ಮೀರಿ ರೈಲ್ವೇ ಸಚಿವರಾಗಿ ವಿಶ್ರಾಮರಹಿತ ಮಾಡಿದ ಕೆಲಸಗಳು ಅವರನ್ನು ರಾಜ್ಯಾದ್ಯಂತ ಜನಪ್ರಿಯಗೊಳಿಸಿದವು. ಅಂಗಡಿ ನಿಧನದ ತರುವಾಯ ಗರಿಗೆದರಿದ್ದ ಸಾರ್ವಜನಿಕ ಚರ್ಚೆಯ ನಿರೀಕ್ಷೆಯಂತೆ ಅವರ ಕುಟುಂಬದ ಪೈಕಿ ಅವರ ಪತ್ನಿ ಮಂಗಲಾ ಅಂಗಡಿ ಅವರಿಗೆ ಬಿಜೆಪಿ ಕೇಂದ್ರ ಸಮಿತಿ ಟಿಕೇಟ್ ನೀಡಿದೆ.ಅನುಕಂಪ ಎನ್ನುವುದಕ್ಕಿಂತ ಅಂಗಡಿ ಅವರಂತೆ ಸಜ್ಜನ ಅಭ್ಯರ್ಥಿಯ ಹುಡುಕಾಟ ಬಿಜೆಪಿ ನಡೆಸಿ ಯಶಸ್ವಿಯಾಗಿದೆ ಎನ್ನಬಹುದು. ಸದಾ ಹಸನ್ಮುಖಿ, ಮಿತಭಾಷಿ, ವ್ಯಸ್ತ ಕೆಲಸದಲ್ಲಿ ಗಂಭೀರತೆ ಮತ್ತು ಜನರಿಗೆ ಕೊಡಬೇಕಾದ ಗೌರವಾದರಗಳ ವಿಷಯದಲ್ಲಿ ಮಂಗಲಾ ಅಂಗಡಿ ಸಹ ಹಿಂದೆ ಬೀಳುವವರಲ್ಲ ಎನ್ನುತ್ತಿವೆ ಅವರ ಆಪ್ತ ವಲಯದ ಮೂಲಗಳು.

ಕಾಂಗ್ರೆಸ್ ಪಕ್ಷದಿಂದ ರಾಜ್ಯ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಫರ್ಧೆಗೆ ಟಿಕೇಟ್ ಪಡೆದಿದ್ದರೂ, ಮಂಗಲಾ ಎದುರು ಸ್ಪರ್ಧೆ ಈ ಹಂತದಲ್ಲಿ ಕಠಿಣವೆಂದೇ ವಿಶ್ಲೇಷಿಸಲಾಗಿದೆ. ಕಾಂಗ್ರೆಸ್, ಎಂಇಎಸ್, ಜೆಡಿಎಸ್ ಮತ್ತು ಇತರ ಪಕ್ಷಗಳು ಸಹ ಅಂತರಂಗದಲ್ಲಿ ಬಿಜೆಪಿಗೇ ಸಪೋರ್ಟ್ ಮಾಡುವ ರಾಜಕೀಯ ಲಕ್ಷಣಗಳು ಗರಿಗೆದರಿವೆ. ದುಖಃ ಸಂತೋಷ ಒಮ್ಮೆಲೆ ಉಮ್ಮಳಿಸಿ ಪತಿಯ ಹಾದಿಯಲ್ಲೇ ರಾಜಕೀಯ ಮತ್ತು ಆಡಳಿತಾತ್ಮಕ ಹೆಜ್ಜೆ ತುಳಿಯುವುದಾಗಿ ಮಂಗಲಾ ಅಂಗಡಿ ಟಿಕೇಟ್ ದೊರೆತ ತರುವಾಯ ಘೋಷಿಸಿದ್ದಾರೆ.

ಈಗಾಗಲೇ ಯಮಕನಮರಡಿ ಕ್ಷೇತ್ರದ ಶಾಸಕರಾಗಿರುವ ಸತೀಶ ಜಾರಕಿಹೊಳಿ ಬೆಳಗಾವಿ ಲೋಕಸಭೆ ಕ್ಷೇತ್ರ ಗೆಲ್ಲಲೆಬೇಕು ಎಂಬ ಅಚಲ ಹಠಕ್ಕೆ ಬೀಳುವ ಪ್ರಮೇಯವೂ ಕಡಿಮೆ ಎನ್ನಲಾಗುತ್ತಿದೆ. ಮಂಗಲಾ ಅಂಗಡಿ ಅವರಿಗೆ ಟಿಕೇಟ್ ದೊರೆಯುತ್ತಿದ್ದಂತೆ ಪಕ್ಷದ ಮೊಗಸಾಲೆಯಲ್ಲಿ ಟಿಕೇಟ್ ಆಕಾಂಕ್ಷಿಗಳಿಗೆ ಸ್ವಾಭಾವಿಕ ಬೇಸರ ಮೂಡಿಸಿರಬಹುದು ಆದ್ರೆ ಉಲ್ಟಾ ಹೊಡೆಯಲು ಮತದಾರರು ಸ್ಪಂದಿಸುವುದಿಲ್ಲ. ಇನ್ನೂ ರಾಜಕೀಯ ನಿವೃತ್ತಿ ಹೊಂದದೇ ಇರುವವರೂ ಸೇರಿದಂತೆ ಬಿಜೆಪಿ ಪಕ್ಷದೊಳಗಿನ ಯುವ ಆಕಾಂಕ್ಷಿಗಳು ಮತ್ತು ಉದ್ಯಮಿಗಳಿಗೆ ಸದ್ಯಕ್ಕಂತೂ ಟಿಕೇಟ್ ಬಗೆಗಿನ ಗೊಂದಲಕ್ಕೆ ಬಿಜೆಪಿ ಕೇಂದ್ರ ಸಮಿತಿ ಮಂಗಲಾ ಅವರಿಗೆ ಟಿಕೇಟ್ ನೀಡಿ ತೆರೆ ಎಳೆಯುವಲ್ಲಿ ಸಫಲವಾಗಿದೆ.ಅಂಗಡಿ ಅವರ ಮಗಳು ಶೃದ್ಧಾ ಅವರಿಗೆ ಟಿಕೇಟ್ ಕೈತಪ್ಪಲು ಅವರಿಗೆ ‘ಶೆಟ್ಟರ್’ ಕಂಟಕವಾಯಿತು ಎನ್ನಲಾಗಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಸೊಸೆಯಾಗಿದ್ದರಿಂದ ‘ಶೆಟ್ಟರ್’ ಮನೆಹೆಸರು ಬೆಳಗಾವಿ ಲೋಕಸಭೆ ಟಿಕೇಟ್ ಪಡೆಯಲು ಕೊನೆಕ್ಷಣದಲ್ಲಿ ಅನಾನುಕೂಲ ಸೃಷ್ಟಿಸಿತು.ಪ್ರಸ್ತುತ ಸಂದರ್ಭದಲ್ಲಿ ಮಂಗಲಾ ಅಂಗಡಿ ಇಲ್ಲವೇ ‘ಶ್ರದ್ಧಾ’ ಹೊರತುಪಡಿಸಿ ಬೇರೆ ಯಾರಿಗಾದರೂ ಪಕ್ಷ ಟಿಕೇಟ್ ನೀಡಿದ್ದಿದ್ದರೆ, ಕಾಂಗ್ರೆಸ್ ನ ಸತೀಶ ಜಾರಕಿಹೊಳಿ ವಿರುದ್ದ ಬಜೆಪಿ ವಾಶ್ ಔಟ್ ಆಗುವುದು ಖಚಿತವಾಗಿತ್ತು ಎಂಬುವುದು ಜನಚರ್ಚೆಯಲ್ಲಿದೆ.