SHARE

ಬೆಳಗಾವಿ:ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಜನ ಮಾನಸದಲ್ಲಿ ವಿಶ್ವಾಸ ಮೂಡಿದ್ದು, ಪ್ರಚಾರದ ವೇಳೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಂಗಲಾ ಅಂಗಡಿಯವರ ಗೆಲುವು ಖಚಿತ ಎಂದು ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಘೂಳಪ್ಪ ಹೊಸಮನಿ ಹೇಳಿದ್ದಾರೆ. ಜಿಲ್ಲೆಯ ವಿವಿಧೆಡೆ ಬಿಜೆಪಿ ಚುನಾವಣಾ ಪ್ರಚಾರ ನಡೆಸಿದ ಅವರು, ಬೆಳಗಾವಿ ನಗರ ಸೇರಿದಂತೆ ಬೈಲಹೊಂಗಲ, ಸವದತ್ತಿ, ರಾಮದುರ್ಗ ಭಾಗದಲ್ಲಿ ಪ್ರಚಾರಕ್ಕೆ ಹೋದಾಗ ಅತ್ಯುತ್ತಮ ಜನ ಸ್ಪಂದನೆ ಸಿಕ್ಕಿದೆ. ಜನ ಈ ಸಲವೂ ಬಿಜೆಪಿಯನ್ನು ದಾಖಲೆ ಮತಗಳಿಂದ ಗೆಲ್ಲಿಸಲಿದ್ದಾರೆ ಎಂದು ಹೇಳಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರಕಾರಗಳು ಮಾಡಿರುವ ಕೆಲಸಗಳನ್ನು ಜನ ಕೊಂಡಾಡುತ್ತಿದ್ದಾರೆ. ಎರಡೂ ಸರಕಾರಗಳು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಜನರ ಬೇಡಿಕೆಗಳಿಗೆ ಸ್ಪಂದಿಸುತ್ತಿವೆ ಎಂದು ಹೇಳಿದರು. ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸತತವಾಗಿ ನಾಲ್ಕು ಸಲ ಪ್ರತಿನಿಧಿಸಿರುವ ಸುರೇಶ ಅಂಗಡಿ ಅವರು ಇಡೀ ಮತಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವರಾಗಿ ಸುರೇಶ ಅಂಗಡಿ ಕರ್ನಾಟಕಕ್ಕೆ ಸಾಕಷ್ಟು ಅಭಿವೃದ್ಧಿ ಯೋಜನೆ ತಂದಿದ್ದಾರೆ. ಒಂದೂವರೆ ವರ್ಷಗಳಿಂದ ರೈಲು ಯೋಜನೆಗಳನ್ನು ಬೆಳಗಾವಿಗೆ ತಂದು ಜನರ ಮನದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಇವೆಲ್ಲವೂ ಬಿಜೆಪಿಗೆ ದೊಡ್ಡ ಪ್ರಮಾಣದ ಗೆಲವು ತರಲಿದೆ ಎಂದು ಹೇಳಿದರು. ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಸೇರಿದಂತೆ ಇತರರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.