SHARE

ಬೆಳಗಾವಿ:ವೇದಗಂಗಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪುಣಾ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಂ.4 ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ವೇದಗಂಗಾ ನದಿ ನಿಪ್ಪಾಣಿಯ ಯಮಗರಣಿ ಬಳಿ ಉಕ್ಕಿ ಹರಿಯುತ್ತಿದೆ. ಪೊಲೀಸರು ವಾಹನಗಳ ಮಾರ್ಗ ಬದಲಿಸುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ತುಮಕೂರು, ದಾವಣಗೆರೆ, ಧಾರವಾಡ, ಹಾವೇರಿಗಳಿಂದ ಮಹಾರಾಷ್ಟ್ರ ಮತ್ತು ಉತ್ತರ ಭಾರತಕ್ಕೆ ತೆರಳುವ ವಾಹನಗಳು ಈ ಮಾರ್ಗದಲ್ಲಿ ಬರದಂತೆ ಎಸ್ಪಿ ಲಕ್ಷ್ಣಣ ನಿಂಬರಗಿ ಸೂಚಿಸಿದ್ದಾರೆ. ಹೊಸಪೇಟೆ -ವಿಜಯಪುರ, ಹುಬ್ಬಳ್ಳಿ – ವಿಜಯಪುರ ಮಾರ್ಗದಲ್ಲಿ ಸಂಚರಿಸುವಂತೆ ತಿಳಿಸಿದ್ದಾರೆ. ಹಿರೇಬಾಗೇವಾಡಿ ಮತ್ತು ಹತ್ತರಗಿ ಬಳಿ ವಾಹನಗಳನ್ನು ತಡೆಯಲಾಗುತ್ತಿದೆ. ಮಹಾರಾಷ್ಟ್ರದಿಂದ ಬರುವ ವಾಹನಗಳನ್ನೂ ಕೊಗನೋಳಿ ಬಳಿ ವಾಪಸ್ ಕಳಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದೆ. ನಗರದ ಅಪಾರ್ಟ್ ಮೆಂಟ್ ಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದೆ. ಸಂಚಾರ ಅಸ್ತವ್ಯಸ್ತವಾಗಿದೆ. ಖಾನಾಪುರ, ಸಂಕೇಶ್ವರ ಪ್ರದೇಶಗಳಲ್ಲೂ ಭಾರಿ ಮಳೆಯಾಗುತ್ತಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ಸೇತುವೆಗಳು ಜಲಾವೃತವಾಗುತ್ತಿವೆ.